ADVERTISEMENT

‘ಮಾರಾಟಕ್ಕಿಲ್ಲ’ ಎಂದು‌ ಮುದ್ರಿಸದ ಔಷಧಿ ಖರೀದಿಸಿದ ಬಿಮ್ಸ್

ಕಾಳಸಂತೆಯಲ್ಲಿ ಸರ್ಕಾರಿ ಔಷಧಿ ಮಾರಾಟ ಆರೋಪ

ಸಂತೋಷ ಈ.ಚಿನಗುಡಿ
Published 5 ಅಕ್ಟೋಬರ್ 2024, 5:11 IST
Last Updated 5 ಅಕ್ಟೋಬರ್ 2024, 5:11 IST
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್‌) 
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್‌)    

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಖರೀದಿಸಿದ ಔಷಧಿ ಮತ್ತು ಕಾಸ್ಮೊಟಿಕ್ ಸಾಮಗ್ರಿಗಳ ಮೇಲೆ ‘ಮಾರಾಟಕ್ಕಿಲ್ಲ’(ನಾಟ್ ಫಾರ್ ಸೇಲ್) ಎಂಬ ಅಕ್ಷರ ಮುದ್ರಿಸಿಲ್ಲ. ಇದರಿಂದ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ‌ ಎಂದು ರೋಗಿಗಳು ದೂರಿದ್ದಾರೆ. ಇದರಿಂದ ಎಚ್ಚೆತ್ತ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕರು ಎಲ್ಲ ಔಷದಿಗಳನ್ನೂ ಹಿಂದಿರುಗಿಸಲು ಮುಂದಾಗಿದ್ದಾರೆ.

ಬೆಂಗಳೂರಿನ ಅರ್ಚನಾ ಅಸೋಸಿಯೇಟ್ಸ್ ಎಂಬ ಔಷಧ ತಯಾರಿಕಾ ಕಂಪನಿ‌ಗೆ ಬಿಮ್ಸ್ ಫೆಬ್ರವರಿಯಲ್ಲಿ ಟೆಂಡರ್ ನೀಡಿದೆ. ಏಪ್ರಿಲ್‌ನಿಂದ ಔಷಧಿಗಳು‌ ಹಾಗೂ ಕೆಲ ವೈದ್ಯಕೀಯ ಕಾಸ್ಮೊಟಿಕ್ಸ್ ಸರಬರಾಜು ಆಗುತ್ತಿವೆ. ಈವರೆಗೆ ಬಂದ ಯಾವುದೇ ಔಷಧಿಯ ಪ್ಯಾಕ್ ಹಾಗೂ ಕಾಸ್ಮೊಟಿಕ್ಸ್ ಪೊಟ್ಟಣದ ಮೇಲೆ ‘ಮಾರಾಟಕ್ಕಿಲ್ಲ’ ಎಂಬ ಸಾಲು ಮುದ್ರಣವಾಗಿಲ್ಲ. ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಆಗುವ ಪ್ರತಿ ವಸ್ತುವಿನ ಮೇಲೆ ಈ ಸಾಲು‌ ಕಡ್ಡಾಯವಾಗಿ ಇರಬೇಕು ಎಂಬ ನಿಯಮ ಪಾಲನೆ ಆಗಿಲ್ಲ.

ಈ ಬಗ್ಗೆ ಜನರಿಂದ ತಕರಾರು ವ್ಯಕ್ತವಾದ ನಂತರ ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ ಅವರು, ಔಷಧ ಸರಬರಾಜು ಮಾಡಿದ ಕಂಪನಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಕಂಪನಿ ಅಧಿಕಾರಿಗಳು, ‘ಔಷಧ ಮತ್ತು ಸೌಂದರ್ಯ ವರ್ಧಕಗಳ ಮಾರಾಟ ಕಾಯ್ದೆ’ ಪ್ರಕಾರ ಪೊಟ್ಟಣದ ಮೇಲೆ ಹೆಚ್ಚುವರಿಯಾಗಿ ಯಾವುದೇ ಅಕ್ಷರ ಮುದ್ರಿಸುವಂತಿಲ್ಲ’ ಎಂದು‌ ತಿಳಿಸಿದ್ದಾರೆ.

₹8 ಕೋಟಿ ಮೊತ್ತದ ಔಷಧಿ:

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ‘ಬಿಮ್ಸ್‌ಗೆ ವಾರ್ಷಿಕ ₹8 ಕೋಟಿಗೂ ಅಧಿಕ ಮೊತ್ತದ ಔಷಧ ಬೇಕು. ಈ ವರ್ಷ ಕೂಡ ಅಷ್ಟೇ ಮೊತ್ತದ ಔಷಧ ಖರೀದಿ‌ಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಔಷಧ ಉತ್ಪಾದನಾ ಕಂಪನಿಗಳು ಪಾಲ್ಗೊಂಡಿದ್ದವು. ಕೆಲ ಕಂಪನಿಗಳು ‘ನಾಟ್ ಫಾರ್ ಸೇಲ್’ ಎಂದು ಮುದ್ರಿಸಿ ನೀಡುತ್ತಿವೆ. ಅರ್ಚನಾ ಅಸೋಸಿಯೇಟ್ಸ್ ಹಾಗೆ‌ ಮುದ್ರಿಸಿಲ್ಲ. ಅವರಿಗೆ ಔಷಧ ಮರಳಿ ಕೊಡಲು‌ ನಿರ್ಧರಿಸಲಾಗಿದೆ’ ಎಂದರು.

'ಔಷಧಗಳ ಮೇಲೆ 'ಬಿಮ್ಸ್' ಅಥವಾ 'ನಾಟ್ ಫಾರ್ ಸೇಲ್' ಎಂಬ ಬರಹ ಇಲ್ಲದಿರುವುದು ತಡವಾಗಿ‌ ಗೊತ್ತಾಗಿದೆ' ಎಂದರು.

‘ಇದು‌ ನಿಯಮಬಾಹಿರ ಆಗಿದ್ದು, ಔಷಧಗಳನ್ನು ತಿರಸ್ಕರಿಸಬೇಕಿದ್ದ ಬಿಮ್ಸ್ ಅಧಿಕಾರಿಗಳು ವಿಳಂಬ ಮಾಡಿದ್ದು ಸರಿಯಲ್ಲ’ ಎಂದು ಒಳರೋಗಿಯ ಸಂಬಂಧಿಕರಾದ ಶಂಕರೆಪ್ಪ ಮುಪ್ಪಿನ ದೂರಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಗುತ್ತಿಗೆ ಆಧಾರದ ಮೇಲೆ‌ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಿ ಕೆಲಸದ ಸಮಯ ಮುಗಿದ ನಂತರ ಅವರು ಬೇರೆಬೇರೆ ಕಡೆಯೂ ಕೆಲಸ ಮಾಡುತ್ತಾರೆ. ಅಂಥವರ ಕ್ಲಿನಿಕ್ ಹಾಗೂ ಔಷಧ ಅಂಗಡಿಗಳಿಗೆ ಈ ಔಷಧಗಳು ರವಾನೆಯಾಗುವ ಸಾಧ್ಯತೆ ಇದೆ’ ಎಂಬುದು ರೋಗಿಗಳ ಸಂಬಂಧಿಕರ ತಕರಾರು.

‘ವೈದ್ಯರು ಒಂದು ವಾರದ ಔಷಧ ಬರೆದುಕೊಟ್ಟರೆ ಮಳಿಗೆಯಲ್ಲಿ ಅರ್ಧ ಮಾತ್ರ ಕೊಡುತ್ತಾರೆ. ಉಳಿದವು ನಮ್ಮಲ್ಲಿ ಇಲ್ಲ‌ ಹೊರಗಡೆ ಖರೀದಿಸಿ ಎನ್ನುತ್ತಾರೆ. ಇಂಥ ಘಟನೆಗಳು ಅನುಮಾನಕ್ಕೆ ಎಡೆ ಮಾಡಿಕೊಡುತ್ತವೆ’ ಎಂದು ಅವರ ದೂರುತ್ತಾರೆ.

ಬಿಮ್ಸ್‌ಗೆ ವರ್ಷಕ್ಕೆ ₹8 ಕೋಟಿ ಮೊತ್ತದ ಔಷಧ ಖರೀದಿಗೆ ಟೆಂಡರ್ ಮಾಡಲಾಗಿದೆ. ಯಾವುದೂ ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಲಾಗಿದೆ.
ಡಾ.ಅಶೋಕಕುಮಾರ್ ಶೆಟ್ಟಿ, ನಿರ್ದೇಶಕ ಬಿಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.