ADVERTISEMENT

ವಿಧಾನಪರಿಷತ್‌ ಚುನಾವಣೆ: ಮನವೊಲಿಕೆಗೆ ಜಗ್ಗದ ಜಾರಕಿಹೊಳಿ ಸಹೋದರರು

ಹಿಂದೆ ಸರಿಯದ ಲಖನ್‌. ತ್ರಿಕೋನ ಹಣಾಹಣಿಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 12:46 IST
Last Updated 26 ನವೆಂಬರ್ 2021, 12:46 IST

ಬೆಳಗಾವಿ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ ದ್ವಿಸದಸ್ಯ ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಯಲ್ಲಿ ತ್ರಿಕೋನ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ನಿಂದ ಚನ್ನರಾಜ ಹಟ್ಟಿಹೊಳಿ, ಆಮ್ ಆದ್ಮಿ ಪಕ್ಷದ ಶೇಖರ ಹೆಗಡೆ, ಪಕ್ಷೇತರ ಅಭ್ಯರ್ಥಿಗಳಾದ ಲಖನ್ ಜಾರಕಿಹೊಳಿ, ಶಂಕರ ಕುಡಸೋಮಣ್ಣವರ ಹಾಗೂ ಕಲ್ಮೇಶ ಗಾಣಗಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಶುಕ್ರವಾರ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ರಾಮದುರ್ಗ ತಾಲ್ಲೂಕಿನ ಲಖನಾಯಕನಕೊಪ್ಪದ ಸಂಗಮೇಶ ಚಿಕ್ಕನರಗುಂದ ಹಾಗೂ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಅಶೋಕ ಪಿ. ಹಣಜಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡರು. ಇದರೊಂದಿಗೆ 2 ಸ್ಥಾನಗಳಿಗೆ ಆರು ಮಂದಿಯ ನಡುವೆ ಪೈಪೋಟಿ ಆರಂಭವಾಗಿದೆ.

ADVERTISEMENT

ಈ ನಡುವೆ, ಲಖನ್ ನಾಮಪತ್ರ ವಾಪಸ್ ಪಡೆಯಬಹುದು ಎನ್ನುವ ಬಿಜೆಪಿಯ ಮುಖಂಡರ ನಿರೀಕ್ಷೆ ಹುಸಿಯಾಗಿದೆ. ಅವರು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸಡ್ಡು ಹೊಡೆದಿದ್ದಾರೆ. ಲಖನ್ ಸ್ಪರ್ಧೆಯಿಂದ ತಮ್ಮ ಅಧಿಕೃತ ಅರ್ಥಿಗೆ ಸಮಸ್ಯೆ ಆಗಬಹುದು ಎಂಬ ಆತಂಕ ಬಿಜೆಪಿಯವರಿಗಿದೆ. ಹೀಗಾಗಿ, ಮುಖಂಡರು ಲಖನ್ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವ ಪ್ರಯತ್ನ ನಡೆಸಿದ್ದರು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಲಖನ್ ನಾಮಪತ್ರ ವಾಪಸ್ ಪಡೆದಲ್ಲ. ಹೀಗಾಗಿ, ಊಹಾಪೋಹಗಳಿಗೆ ತೆರೆ ಬೀಳುವ ಜೊತೆಗೆ ತ್ರಿಕೋನ ಹಣಾಹಣಿ ಖಚಿತವಾಗಿದೆ.

ಜಾರಕಿಹೊಳಿ ಸಹೋದರರಾದ ರಮೇಶ ಹಾಗೂ ಬಾಲಚಂದ್ರ ಅವರೊಂದಿಗೆ ಚರ್ಚಿಸಿರುವ ಬಿಜೆಪಿ ವರಿಷ್ಠರು, ‘ಪಕ್ಷದ ಅಭ್ಯರ್ಥಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂಬ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ‘ಪಕ್ಷದಿಂದ 2ನೇ ಅಭ್ಯರ್ಥಿಗೆ ಅಧಿಕೃತವಾಗಿ ಬೆಂಬಲ ನೀಡಲು ಅವಕಾಶ ಕೊಡುವಂತೆ ಕೋರುವುದಕ್ಕಾಗಿ ರಮೇಶ ಜಾರಕಿಹೊಳಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಲು ನ.29ರಂದು ತೆರಳಲಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಈ ಮಧ್ಯೆ, ಲಖನ್‌ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಜೊತೆಗೆ ಲಖನ್‌ಗೂ ಬೆಂಬಲ ನೀಡಬೇಕು ಎಂದು ರಮೇಶ ಹಾಗೂ ಬಾಲಚಂದ್ರ ಕೂಡ ಪ್ರಚಾರ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇತ್ತ, ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಹಾಗೂ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ತಮ್ಮ ಪಕ್ಷಗಳ ಮುಖಂಡರೊಂದಿಗೆ ಪ್ರಚಾರ–ಪ್ರವಾಸ ಮುಂದುವರಿಸಿದ್ದಾರೆ.ಆಮ್ ಆದ್ಮಿ ಪಕ್ಷದ ಶೇಖರ ತಮ್ಮದೇ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮತದಾರರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ. ಬಹಳಷ್ಟು ಸ್ಥಳೀಯ ಸಂಸ್ಥೆಗಳ ಸದಸ್ಯರು ಎಲ್ಲ ಪ್ರಚಾರ ಸಭೆಗಳಲ್ಲೂ ಭಾಗವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.