ರಾಮದುರ್ಗ: ‘ಕಾಂಗ್ರೆಸ್ ಬಗ್ಗೆ ರಾಜ್ಯದ ಜನರಲ್ಲಿ ಈಗ ಆಕ್ರೋಶ ಮಡುಗಟ್ಟಿದೆ. ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸಿದರೆ, ಬಿಜೆಪಿ ಸುಮಾರು 140 ಸ್ಥಾನ ಗೆಲ್ಲಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಟಕುರ್ಕಿ ಗ್ರಾಮದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳ ಶನಿವಾರ ಹಮ್ಮಿಕೊಂಡಿದ್ದ 60ನೇ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್‌ನಲ್ಲಿ ಎಲ್ಲರೂ ಸಿದ್ದರಾಮಯ್ಯ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಹಾಗಾಗಿ ಸಿ.ಎಂ ಸ್ಥಾನಕ್ಕಾಗಿ ಬಹುತೇಕರು ಪೈಪೋಟಿ ನಡೆಸುತ್ತಿದ್ದಾರೆ’ ಎಂದರು.
‘ಬಿಜೆಪಿಯವರಿಗೆ ಸಿದ್ದರಾಮಯ್ಯ ರಾಜೀನಾಮೆ ಕೇಳುವ ಹಕ್ಕಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಹೆಬ್ಬಾಳಕರ ಡಿ.ಕೆ.ಶಿವಕುಮಾರ್ ಆಪ್ತರು. ಶಿವಕುಮಾರ್ ನೆರವಿನಿಂದಲೇ ಅವರು ಸಚಿವರಾಗಿದ್ದಾರೆ. ಆದರೆ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನೆಪಮಾತ್ರಕ್ಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
‘ವಿಶ್ವದಲ್ಲಿ ಹಿಂದೂ ರಾಷ್ಟ್ರ ಇರುವುದು ಭಾರತದಲ್ಲಿ ಮಾತ್ರ. ಭಾರತ ಹಾಗೂ ಹಿಂದೂಗಳು ಸುರಕ್ಷಿತವಾಗಿ ಇರಬೇಕೆಂದರೆ, ಹಿಂದೂತ್ವ ಬೆಂಬಲಿಸುವ ರಾಜಕೀಯ ಪಕ್ಷ ಬೆಂಬಲಿಸಬೇಕಾದ ಅವಶ್ಯಕತೆ ಇದೆ’ ಎಂದು ತಿಳಿಸಿದರು.
‘ಈಗ ಪ್ರಾಮಾಣಿಕ ರಾಜಕಾರಣಿಗೆ ಭವಿಷ್ಯವಿಲ್ಲ. ಸಚಿವನಾದರೆ ನಾನು ಮುಖ್ಯಮಂತ್ರಿ ಆಗಬಹುದು ಎನ್ನುವ ಕಾರಣಕ್ಕೆ, ಕಳೆದ ಬಾರಿ ನನಗೆ ಸಚಿವ ಸ್ಥಾನ ಕೊಡಲಿಲ್ಲ. ಆದರೆ, ನಾನು ಯಾವುದಕ್ಕೂ ಹೆದರುವುದಿಲ್ಲ. ಈಗ ಹೊಸ ಅಧ್ಯಾಯ ಆರಂಭಕ್ಕೆ ಕಾಲ ಕೂಡಿಬಂದಿದೆ. ನಿಮ್ಮ ಬೆಂಬಲ ನೋಡಿದರೆ, ಬಿಜೆಪಿಯಿಂದ ಮುಂದೆ ನಾನೇ ಮುಖ್ಯಮಂತ್ರಿ ಆಗುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.