ADVERTISEMENT

ಬಸನಗೌಡ ಪಾಟೀಲ ಯತ್ನಾಳರನ್ನು ರಾಜಕೀಯವಾಗಿ ಹತ್ತಿಕ್ಕಲು ಯತ್ನ: ಪಂಚಮಸಾಲಿ ಶ್ರೀ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 12:48 IST
Last Updated 2 ಜನವರಿ 2024, 12:48 IST
<div class="paragraphs"><p>ಬಸವಜಯ ಮೃತ್ಯುಂಜಯ ಸ್ವಾಮೀಜಿ</p></div>

ಬಸವಜಯ ಮೃತ್ಯುಂಜಯ ಸ್ವಾಮೀಜಿ

   

ಬೆಳಗಾವಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡಿದ ಆರೋಪಗಳಿಗೆ ಪಕ್ಷ ವಿರೋಧ ಪಟ್ಟ ಕಟ್ಟಲಾಗಿದೆ. ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಪಂಚಮಸಾಲಿಗರಿಗೆ 2ಎ ಮೀಸಲಾತಿಗಾಗಿ ಯತ್ನಾಳ ಹೋರಾಟ ಮಾಡುತ್ತಿದ್ದಾರೆ. ಈ ಕಾರಣಕ್ಕೇ ಅವರಿಗೆ ಪಕ್ಷದಲ್ಲಿ ಅವಕಾಶ ತಪ್ಪಿಸಲಾಗಿದೆ, ರಾಜಕೀಯವಾಗಿ ತುಳಿಯಲಾಗುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಬಿಜೆಪಿ ಅಧ್ಯಕ್ಷ‌‌ ಜೆ.ಪಿ.ನಡ್ಡಾ ಈ ಅನ್ಯಾಯ ಸರಿಪಡಿಸಬೇಕು. ಪಿತೂರಿಗೆ ಕಡಿವಾಣ ಹಾಕಬೇಕು’ ಎಂದು ಅವರು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

‘ಯತ್ನಾಳ ನಮ್ಮೊಂದಿಗೆ ಹೋರಾಟ ಮಾಡಿದ್ದು ಮತ್ತು ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು ತಪ್ಪೇ? ನಮ್ಮ ಸಮುದಾಯದವರನ್ನು ಕಡೆಗಣಿಸುತ್ತಿರುವುದು ಏಕೆ ಎಂದು ಬಿಜೆಪಿಯವರು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

‘ಯತ್ನಾಳ ಮೇಲಾದ ಅನ್ಯಾಯ ಏನೆಂದು ಸ್ಪಷ್ಟವಾಗಿ ಹೇಳಿ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದಿನ ಸರ್ಕಾರದಲ್ಲಿ ಅವರು ಮಂತ್ರಿಯೂ ಆಗಲಿಲ್ಲ, ಈಗ ವಿಪಕ್ಷ ನಾಯಕ ಸ್ಥಾನವನ್ನೂ ನೀಡಲಿಲ್ಲ. ಯತ್ನಾಳ ಅವರನ್ನು ರಾಜಕೀಯವಾಗಿ ಕಗ್ಗೊಲೆ ಮಾಡಲಾಗುತ್ತಿದೆ’ ಎಂದೂ ದೂರಿದರು.

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಂಚಮಸಾಲಿ ಸಮುದಾಯ ತುಳಿಯಲು ಕುತಂತ್ರ ನಡೆಸಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಇಡೀ ಸಮುದಾಯವೇ ಪಕ್ಷದ ವಿರುದ್ಧ ಸಿಡಿದೇಳಬೇಕಾಗುತ್ತದೆ' ಎಂದು ಮುಖಂಡರಾದ ಬಸವರಾಜ ಪಾಟೀಲ ನಾಗರಾಳ ಹುಲಿ, ನಿಂಗಪ್ಪ ಪಿರೋಜಿ, ಗುಂಡು ಪಾಟೀಲ, ನಿಂಗಪ್ಪ ಚಳಗೇರಿ ಎಚ್ಚರಿಸಿದರು.

‘ಕೂಡಲಸಂಗಮ ಶ್ರೀಗಳು ಜಾತಿಗೆ ಸೀಮಿತವಾಗಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ನೀಡಿದ ಹೇಳಿಕೆ ಖಂಡನೀಯ. ಇದು ಅವರ ವೈಯಕ್ತಿಕ ಹೇಳಿಕೆಯೋ, ಪಕ್ಷದ ಹೇಳಿಕೆಯೋ ಎಂದು ಸ್ಪಷ್ಪಪಡಿಸಬೇಕು. ವೈಯಕ್ತಿಕ ಹೇಳಿಕೆಯಾಗಿದ್ದರೆ ಪಕ್ಷದಿಂದ ಅವರನ್ನು ಉಚ್ಚಾಟಿಸಬೇಕು’ ಎಂದೂ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.