ಗೋಕಾಕ: ಇಲ್ಲಿನ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ರೋಟರಿ ಸೇವಾ ಸಂಘದಿಂದ ಡಾ.ಬಿ.ಸಿ. ಆಜರಿ ಸ್ಮರಣಾರ್ಥ ₹ 60 ಲಕ್ಷ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿದ ‘ರಕ್ತದ ಗುಂಪು ವಿಂಗಡಣಾ ಘಟಕ’ವನ್ನು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಭಾನುವಾರ ಉದ್ಘಾಟಿಸಿದರು.
ಸಂಸದೆ ಮಂಗಳಾ ಅಂಗಡಿ ಮತ್ತು ತಮ್ಮ ರಾಜಸಭಾ ಸದಸ್ಯತ್ವ ನಿಧಿಯಿಂದ ₹ 31.5 ಲಕ್ಷ ನೆರವನ್ನು ರಕ್ತ ಸಂಗ್ರಹಣಾ ವಾಹನ ಖರೀದಿಗಾಗಿ ಅವರು ನೀಡಿದರು.
ಈ ವೇಳೆ ಮಾತನಾಡಿದ ಕಡಾಡಿ, ‘ಜೀವನ ಅನೇಕ ಅನುಭವನಗಳನ್ನು ನೀಡುತ್ತದೆ. ಇಂತಹ ಅನುಭವಗಳನ್ನು ಅರಿತು ರೋಟರಿ ಸಂಸ್ಥೆ ದೇಶದಲ್ಲಿ ಸೇವೆ ನೀಡುತ್ತ ಬಂದಿದೆ. ಸರ್ಕಾರದ ಅನುದಾನವನ್ನು ಸದುಪಯೋಗ ಮಾಡಿಕೊಂಡು ಸಮಾಜದ ಸೇವೆಯಲ್ಲಿ ತೊಡಗಿಸಬೇಕು. ಇನ್ನೂ ಹೆಚ್ಚಿನ ಜನರಿಗೆ ಅವಶ್ಯಕ ಆರೋಗ್ಯ ಸೇವೆ ಒದಗಿಸಬೇಕು’ ಎಂದರು.
ಸಂಸದೆ ಮಂಗಳಾ ಅಂಗಡಿ ಮಾತನಾಡಿ, ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು. ಮನುಷ್ಯನನ್ನು ಬದುಕಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ರಕ್ತ. ರಕ್ತಾ ದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ರೋಟರಿ ಸಂಸ್ಥೆಯ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ಅಧ್ಯಕ್ಷತೆ ವಹಿಸಿದ್ದರು. ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಮಠದ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೋಟರಿ ಜಿಲ್ಲಾ ಪಾಂತ್ರಪಾಲ ವೆಂಕಟೇಶ ದೇಶಪಾಂಡೆ, ಮಾಜಿ ಪ್ರಾಂತಪಾಲ ರವಿಕಿರಣ ಕುಲಕರ್ಣಿ, ರೋಟರಿ ಸೇವಾ ಸಂಘದ ಸೋಮಶೇಖರ ಮಗದುಮ್ಮ, ಸುರೇಶ ರಾಠೋಡ, ರೋಟರಿ ಸಂಸ್ಥೆಯ ಸತೀಶ ನಾಡಗೌಡ, ಮಲ್ಲಿಕಾರ್ಜುನ ಈಟಿ, ವಿಜಯಕುಮಾರ್ ಧುಳಾಯಿ, ವಿದ್ಯಾ ಗುಲ್, ಅನುಪಾ ಕೌಶಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.