ಬೆಳಗಾವಿ: ‘ಬಾಳ್ ದಿನದಿಂದ ನನ್ನ ಮಗಾ ಬ್ಯಾಸರದಾಗ ಇದ್ದ. ಸೋಮವಾರ ರಾತ್ರಿ ಊಟ ಹಚ್ಚಿಕೊಟ್ಟಿದ್ದೆ. ಅಷ್ಟೊತ್ತಿಗೆ ಒಂದು ಫೋನ್ ಬಂತು. ಕೈಯ್ಯಾಗ್ ತಾಟ ಹಿಡಕೊಂಡು ಅತ್ತಿತ್ತ ನಡೆದಾಡಲಿಕತ್ತ. ಹಿಂಗ್ಯಾಕ ಮಾಡಾತಿ ಮಗನ ಒಂದು ಕಡೆ ಕುಂತ ಉಣ್ಣು ಅಂದೆ. ಅಷ್ಟೊತ್ತಿಗೆ ಬರ್ಷನ್ ಕಟ್ಟಿ ಮ್ಯಾಲ ತಾಟ ಇಟ್ಟು ಮಾತಾಡಕೊಂತ ಹೊರಗ ಹೋಗಿ ಬಿಟ್ಟ. ಅದೇ ಅವನ ಮುಖ ಕಡೀಕ ನೋಡಿದ್ದು...’
ಮಂಗಳವಾರ ಬೆಳಿಗ್ಗೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನೇಣಿಗೆ ಶರಣಾದ ಎಸ್‌ಡಿಎ ರುದ್ರಣ್ಣ ಯಡವಣ್ಣವರ ತಾಯಿ ಮಲ್ಲವ್ವ ಅವರ ಮಾತುಗಳಿವು. ರಾತ್ರಿ ಅರೆ ಹೊಟ್ಟೆಯಲ್ಲೇ ಮಲಗಿದ್ದ ರುದ್ರಣ್ಣ, ಬೆಳಿಗ್ಗೆ 6 ಗಂಟೆಗೂ ಮುಂಚೆಯೇ ಎದ್ದು ಹೋಗಿದ್ದ. ರಾತ್ರಿ ಬಂದಿದ್ದ ಆ ಕೊನೆಯ ಮೊಬೈಲ್ ಕರೆ ಅವರನ್ನು ತಡಬಡಾಯಿಸುವಂತೆ ಮಾಡಿತ್ತು.
‘ಏನರ ತ್ರಾಸ ಇದ್ದರ ನನ್ನ ಮುಂದೆ ಹೇಳು ಮಗನ ಅಂದಿದ್ದೆ. ಯಾರ ಮುಂದೆಯೂ ಏನೂ ಹೇಳದಂಥಾ ಪರಿಸ್ಥಿತಿ ಐತಿ ಯವ್ವ ಅಂತಿದ್ದ’ ಎಂದೂ ಮಲ್ಲವ್ವ ಮಗನ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ.
ಆ ಕೊನೆಯ ಕರೆ ಯಾರದು, ನಡೆದ ಸಂಭಾಷಣೆ ಏನು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹೆಚ್ಚಬೇಕಿದೆ. ಸದ್ಯ ರುದ್ರಣ್ಣ ಅವರ ಮೊಬೈಲ್ ಪೊಲೀಸರ ಕೈ ಸೇರಿದೆ. ಸಾಕ್ಷ್ಯಗಳ ಸಂಗ್ರಹ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.
ಕೆಟ್ಟುಹೋದ ಸಿಸಿಟಿವಿಗಳು: ತಹಶೀಲ್ದಾರ್ ಕಚೇರಿಯಲ್ಲಿ ಆರು ಸಿಸಿಟಿವಿ ಕ್ಯಾಮೆರಾಗಳಿವೆ. ಅದರಲ್ಲಿ ಮುಂಬಾಗಿಲಿಗೆ ಇರುವ ಎರಡು ಮಾತ್ರ ಕೆಲಸ ಮಾಡುತ್ತಿವೆ. ಇನ್ನೆರಡು ದೂಳು ಹಿಡಿದಿವೆ. ಉಳಿದೆರಡು ಕೆಟ್ಟಿಹೋಗಿವೆ. ರುದ್ರಣ್ಣ ಮಂಗಳವಾರ ಬೆಳಿಗ್ಗೆ 6.38ಕ್ಕೆ ತಹಶೀಲ್ದಾರ್ ಕಚೇರಿ ಪ್ರವೇಶಿಸಿದ್ದು ಒಂದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಟೇಬಲ್ ಕೂಡ ಕೊಟ್ಟಿರಲಿಲ್ಲ: ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರ ಪಿ.ಎ ಸೋಮು ದೊಡವಾಡೆ ಹಾಗೂ ರುದ್ರಣ್ಣನ ಮಧ್ಯೆ ಕಳೆದ ಕೆಲ ದಿನಗಳಿಂದ ತಿಕ್ಕಾಟಗಳು ಇದ್ದವು. ಕೆಲಸ ಮಾಡಲು ಕಚೇರಿಯಲ್ಲಿ ಅವನಿಗೆ ಮೇಜು ಕೂಡ ಕೊಟ್ಟಿರಲಿಲ್ಲ. ಇವರ ಕೆಲಸದ ವೈಖರಿ ಸರಿ ಇಲ್ಲ ಎಂದು ತಹಶೀಲ್ದಾರರು ಜಿಲ್ಲಾಧಿಕಾರಿಗೆ ವರದಿ ಕೂಡ ನೀಡಿದ್ದರು. ಆದರೆ, ಯಾವ ವಿಷಯದಲ್ಲಿ ಇವರೆಲ್ಲರಿಗೂ ಅಸಮಾಧಾನ ಇತ್ತು ಎಂಬುದು ಪತ್ತೆ ಆಗಬೇಕಿದೆ.
‘ಮಿತಿಮೀರಿದ ಪಿ.ಎ.ಗಳ ಕಾಟ’
‘ಸಚಿವರ ಪಿ.ಎ ಶಾಸಕರ ಪಿ.ಎ ಸಂಸದರ ಪಿ.ಎ ಎಂದು ಹೇಳಿ ತಿರುಗುವವರ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡದಿದೆ. ಸರ್ಕಾರಿ ಕಚೇರಿಗಳಲ್ಲಿ ಇವರದ್ದೇ ಕಾಟ ಹೆಚ್ಚು. ಯಾವ ಊರಿಗೆ ಹೋದರೂ ಜನಪ್ರತಿನಿಧಿಗಳ ಆಪ್ತ ಎಂದು ಹೇಳಿಕೊಳ್ಳುವ ಮರಿ ರಾಜಕಾರಣಿಗಳು ಉಪಟಳ ನೀಡುತ್ತಾರೆ’ ಎಂದು ಹಲವು ಸರ್ಕಾರಿ ಸಿಬ್ಬಂದಿ ದೂರಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ ಸೋಮು ದೊಡವಾಡೆ ಹೆಸರು ರುದ್ರಣ್ಣ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿಬಂದಿದೆ. ವರ್ಗಾವಣೆ ತಪ್ಪಿಸಲು ಸೋಮು ₹2 ಲಕ್ಷ ಕಮಿಷನ್ ಪಡೆದಿದ್ದ ಎಂದು ರುದ್ರಣ್ಣ ಅವರ ತಾಯಿ ಹೇಳಿದ್ದಾರೆ. ಇದ್ಯಾವುದೂ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸಚಿವೆ ಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.
ವರ್ಗಾವಣೆಯೊಂದೇ ಕಾರಣವೇ ಸಾವಿಗೆ?
ರುದ್ರಣ್ಣಗೆ ಬೆಳಗಾವಿಯಿಂದ ಸವದತ್ತಿಗೆ ವರ್ಗವಾಗಿತ್ತು. ಸವದತ್ತಿಗೆ ಹೋಗುವುದಕ್ಕಿಂತ ಸಾವಿನ ಮನೆಗೆ ಹೋಗುವುದು ಸುಲಭ ಎಂದು ನಿರ್ಧರಿಸಿದನೇ? ಸಾವಿಗೆ ವರ್ಗಾವಣೆ ಒಂದೇ ಕಾರಣವೇ? ಎಂಬ ಪ್ರಶ್ನೆಗಳು ಅವರ ಬಂಧುಗಳನ್ನು ಕಾಡುತ್ತಿವೆ. ರುದ್ರಣ್ಣನ ಮೂಲ ಊರು ರಾಯಬಾಗ ತಾಲ್ಲೂಕಿನ ಮುಗಳಖೋಡ. 18 ವರ್ಷಗಳಿಂದ ನೌಕರಿ ಸಿಕ್ಕ ಬಳಿಕ ಬೆಳಗಾವಿಯ ಅಂಬೇಡ್ಕರ್ ನಗರದಲ್ಲಿ ವಾಸವಿದ್ದ. ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿದ್ದವು. ಸಾವು ಒಂದೇ ಮಾರ್ಗವಾಗಿರಲಿಲ್ಲ. ಇದರ ಹಿಂದೇ ಏನೋ ದೊಡ್ಡದು ನಡೆದಿದೆ ಎಂದೂ ಅವರ ಬಂಧುಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.