ADVERTISEMENT

ಬೆಳಗಾವಿ: ಉದ್ಯಾನದಲ್ಲಿ ಕುಳಿತಿದ್ದ ಯುವಕ–ಯುವತಿ ಅಪಹರಿಸಿ ಚಿತ್ರಹಿಂಸೆ

ಪ್ರೇಮಿಗಳೆಂದು ತಿಳಿದು ಅಕ್ಕ– ತಮ್ಮನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 23:51 IST
Last Updated 6 ಜನವರಿ 2024, 23:51 IST
   

ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಶನಿವಾರ ಸಂಜೆ ಮಾತನಾಡುತ್ತ ಕುಳಿತಿದ್ದ ಅಕ್ಕ– ತಮ್ಮನನ್ನು ಪ್ರೇಮಿಗಳೆಂದು ತಿಳಿದು ಏಳು ಆರೋಪಿಗಳ ಗುಂಪು, ಅಹಪರಿಸಿಕೊಂಡು ಹೋಗಿ ತೀವ್ರ ಹಲ್ಲೆ ಮಾಡಿದೆ.

ಬೆಳಗಾವಿ ತಾಲ್ಲೂಕಿನ ಯಮನಾಪುರ ಗ್ರಾಮದ ಸಚಿನ್‌ ಲಮಾನಿ (22) ಹಾಗೂ ಮುಸ್ಕಾನ್‌ ಪಟೇಲ್‌ (23) ಹಲ್ಲೆಗೆ ಒಳಗಾದವರು. ಈ ಇಬ್ಬರೂ ಸಂಬಂಧದಲ್ಲಿ ಅಕ್ಕ– ತಮ್ಮ ಆಗಿದ್ದಾರೆ. ಆದರೆ, ಹಿಂದೂ– ಮುಸ್ಲಿಂ ಪ್ರೇಮಿಗಳೆಂದು ತಿಳಿದು ಆರೋಪಿಗಳು ಹಲ್ಲೆ ಮಾಡಿದ್ದಾರೆ ಎಂದು ಗಾಯಗೊಂಡವರು ತಿಳಿಸಿದ್ದಾರೆ.

ಇಬ್ಬರೂ ಯುವನಿಧಿಗೆ ಅರ್ಜಿ ಸಲ್ಲಿಸಲು ಬೆಳಗಾವಿಗೆ ಬಂದಿದ್ದರು. ಕೇಂದ್ರದಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿ ಕೆಲಸ ಸ್ಥಗಿತಗೊಂಡಿತು. ಸಮಯ ಕಳೆಯಲು ಇಬ್ಬರೂ ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಬಂದು ಮಾತನಾಡುತ್ತ ಕುಳಿತಿದ್ದರು.

ADVERTISEMENT

‘ನಮ್ಮತ್ತ ಧಾವಿಸಿದ ಆರೋಪಿಗಳು ಹಲ್ಲೆ ಮಾಡಿದರು. ನೀವು ಯಾರು, ಏನು ಸಂಬಂಧ ಎಂದೆಲ್ಲ ಪ್ರಶ್ನೆ ಮಾಡಿದರು. ನೀನು ಮುಸ್ಲಿಂ ಆಗಿದ್ದರೂ ಏಕೆ ಹಿಂದೂ ಹುಡುಗನ ಜತೆ ಕುಳಿತಿದ್ದೀಯಾ ಎಂದು ಅಕ್ಕನನ್ನು ಪ್ರಶ್ನಿಸಿದರು. ನಾವು ಅಕ್ಕ– ತಮ್ಮ ಎಂದು ಹೇಳಿದರೂ ಕೇಳಲಿಲ್ಲ. ನಮ್ಮನ್ನು ಎಳೆದುಕೊಂಡು ಹತ್ತಿರದ ಶೆಡ್‌ವೊಂದಕ್ಕೆ ಕರೆದೊಯ್ದರು. ಮೂರು ತಾಸು ರೂಮಿನಲ್ಲಿ ಕೂಡಿಹಾಕಿ, ಮನಸೋ ಇಚ್ಚೆ ಹಲ್ಲೆ ಮಾಡಿದರು’ ಎಂದು ಗಾಯಗೊಂಡ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದರ ಮಧ್ಯೆಯೇ ಯುವಕ ತನ್ನ ಚಿಕ್ಕಪ್ಪ ವಾಲಪ್ಪ ಎನ್ನುವವರಿಗೆ ಫೋನ್‌ ಮಾಡಿದರು. ಗುಂಪಿನಲ್ಲಿ ಬಂದವರಿಗೆ ತಾವು ಅಕ್ಕ– ತಮ್ಮ ಎಂಬುದನ್ನು ಖಚಿತ ಮಾಡಲು ಯತ್ನಿಸಿದರು. ಆದರೆ, ಅವರ ಫೋನ್‌ ಕಿತ್ತುಕೊಂಡ ಆರೋಪಿಗಳು ಸ್ವಿಚ್‌ ಆಫ್‌ ಮಾಡಿದರು. ಅನುಮಾನ ಬಂದ ಯುವಕನ ಚಿಕ್ಕಪ್ಪ ಅದೇ ನಂಬರ್‌ಗೆ ಪದೇಪದೇ ಫೋನ್‌ ಮಾಡಿದರು. ಸ್ವಿಚ್‌ ಆಫ್‌ ಬಂದಿದ್ದರಿಂದ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಕೋಟೆ ಕೆರೆಯತ್ತ ಬಂದ ವಾಲಪ್ಪ ಹಾಗೂ ಇತರರು ಯುವಕ– ಯುವತಿಗಾಗಿ ಹುಡುಕಾಟ ನಡೆಸಿದರು. ದೂರದ ಶೆಡ್‌ನಲ್ಲಿ ಕೂಗಾಟ ಕೇಳಿ ಅವರನ್ನು ಗುರುತಿಸಿದರು. ಪೊಲೀಸರ ನೆರವಿನೊಂದಿಗೆ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು.

‘ಗಾಂಜಾ ನಶೆಯಲ್ಲಿ ಯುವಕರು ಹಲ್ಲೆ ಮಾಡಿದ ಸಾಧ್ಯತೆ ಇದೆ. ಗಾಯಗೊಂಡ ಇಬ್ಬರಿಗೂ ಜಿಲ್ಲಾಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಘಟನೆ ಸಂಬಂಧ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಯುವಕ– ಯುವತಿಗೆ ಹೆಚ್ಚಿನ ಅನಾಹುತ ಆಗದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಸಹಿಸುವುದಿಲ್ಲ. ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಎಸ್‌.ಎನ್‌.ಸಿದ್ರಾಮಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.