ADVERTISEMENT

ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ BSY, ವಿಜಯೇಂದ್ರ ಒಳ ಒಪ್ಪಂದ ಕಾರಣ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 12:44 IST
Last Updated 23 ನವೆಂಬರ್ 2024, 12:44 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

– ಫೇಸ್‌ಬುಕ್ ಚಿತ್ರ

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ‘ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಕಾರಣ. ಅವರು ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡ  ಒಳ ಒಪ್ಪಂದದಿಂದಲೇ ಬಿಜೆಪಿಗೆ ಇಂಥ ದುಃಸ್ಥಿತಿ ಬಂದಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ADVERTISEMENT

ತಾಲ್ಲೂಕಿನ ಕಬ್ಬೂರಿನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ತಂದೆ ಹಾಗೂ ಮಗನೇ ಕಾರಣ. ಇಂಥ ಸೋಲನ್ನು ನಾವು ನಿರೀಕ್ಷಿಸಿರಲಿಲ್ಲ. ಇನ್ನಾದರೂ ಪಕ್ಷದ ಹೈಕಮಾಂಡ್‌ನವರು ತಂದೆ–ಮಗನ ಮೇಲಿನ ಮೋಹ ಬಿಡಬೇಕು’ ಎಂದರು.

‘ಪಕ್ಷಕ್ಕೆ ರಾಜ್ಯದ ಉಸ್ತುವಾರಿ ನೇಮಿಸುವಾಗ, ಬಿಜೆಪಿ ಹೈಕಮಾಂಡ್‌ನವರು ಪ್ರಾಮಾಣಿಕರು ಮತ್ತು ಸಂಸ್ಕಾರವಂತರನ್ನು ಪರಿಗಣಿಸಬೇಕು. ಈ ಹಿಂದೆ ಅರುಣ್‌ ಸಿಂಗ್ ಬಿಜೆಪಿ ರಾಜ್ಯ ಉಸ್ತುವಾರಿಯಾಗಿದ್ದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಂದೇಶವಾಹಕನಾಗಿ ಅವರು ಕೆಲಸ ಮಾಡಿದ್ದರಿಂದ ರಾಜ್ಯದಲ್ಲಿ ಬಿಜೆಪಿಗೆ ಇಂಥ ಸ್ಥಿತಿಗೆ ತಲುಪಿದೆ’ ಎಂದು ದೂರಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನೇಮಿಸಿದ್ದನ್ನು ಜನರು ತಿರಸ್ಕರಿಸಿದ್ದಾರೆ. ಈಗ ಬಿಜೆಪಿ ಹೀನಾಯ ಸೋಲು ಕಂಡಿದ್ದರಿಂದ ನನಗೂ ನೋವಾಗಿದೆ’ ಎಂದರು.

‘ವಕ್ಫ್ ಮಂಡಳಿ ವಿರುದ್ಧದ ಹೋರಾಟದಿಂದ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಿಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ‘ವಕ್ಫ್ ಮಂಡಳಿ ವಿರುದ್ಧದ ಹೋರಾಟ ಈಗ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ವಕ್ಫ್ ಮಂಡಳಿ ವಿಚಾರ ಇಟ್ಟುಕೊಂಡೇ ಚುನಾವಣೆ ಎದುರಿಸಿದ್ದೇವೆ. ಹಾಗಾಗಿ ಅಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ’ ಎಂದು ಹೇಳಿದರು.

‘ಉದ್ಧವ್ ಠಾಕ್ರೆ ಅವರು ಔರಂಗಜೇಬನ ಸಮಾಧಿಗೆ ನಮಸ್ಕಾರ ಮಾಡಿದರು. ಹಾಗಾಗಿ ಮಹಾರಾಷ್ಟ್ರದ ಜನರು ಅವರನ್ನು ಮುಳುಗಿಸಿದರು’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.