ADVERTISEMENT

ಖಿನ್ನತೆ ಇದ್ದಾತನಿಗೆ ಬಂದೂಕು ಕೊಟ್ಟರೇಕೆ?: ಯೋಧ ಸತ್ತೆಪ್ಪ ಸೋದರ ಮಾವ ಬಾಳಪ್ಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 8:49 IST
Last Updated 7 ಮಾರ್ಚ್ 2022, 8:49 IST
ಯೋಧ ಸತ್ತೆಪ್ಪ
ಯೋಧ ಸತ್ತೆಪ್ಪ   

ಬೆಳಗಾವಿ: ಪಂಜಾಬ್ ಸೇನಾ ಶಿಬಿರದಲ್ಲಿ ಗುಂಡು ಹಾರಿಸಿ ನಾಲ್ವರು ಬಿಎಸ್‌ಎಫ್ ಯೋಧರನ್ನು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಯೋಧ ಸತ್ತೆಪ್ಪ ಅವರಿಗೆ ಖಿನ್ನತೆ ಸಮಸ್ಯೆ ಇತ್ತು ಎಂದುಸೋದರ ಮಾವ ಬಾಳಪ್ಪ ಪಕಾಲಿ ಹೇಳಿದ್ದಾರೆ.

‘ಆತ ಒಂದೂವರೆ ವರ್ಷದ ಹಿಂದೆ ₹ 10 ಲಕ್ಷ ಸಾಲ ಮಾಡಿದ್ದ. 3 ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಕೆಲವು ದಿನಗಳ ನಂತರ ಅವರ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿರಲಿಲ್ಲ. ಹುಚ್ಚನಂತೆ ವರ್ತಿಸುತ್ತಿದ್ದ. ಖಿನ್ನತೆಗೆ ಒಳಗಾಗಿದ್ದ. ಆತನನ್ನು ಬೆಳಗಾವಿ ಹಾಗೂ ಧಾರವಾಡದಲ್ಲಿ ನರ ಹಾಗೂ ಮನೋರೋಗ ತಜ್ಞರಿಗೆ ತೋರಿಸಿದ್ದೆವು. ಅವರ ಮಾನಸಿಕ ಆರೋಗ್ಯ ಸರಿ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಅವರ ಬಳಿ ಚಿಕಿತ್ಸೆಯನ್ನೂ ಕೊಡಿಸಿದ್ದೆವು’ ಎಂದು ಸೋದರ ಮಾವ ಬಾಳಪ್ಪ ಪಕಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಂಗಳ ರಜೆ ಮುಗಿದ್ದರಿಂದ, ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಖಲೆಗಳನ್ನು ಕಳುಹಿಸಿ ಮತ್ತೆ 15 ದಿನ ರಜೆ ಪಡೆದಿದ್ದ. ಚೇತರಿಸಿಕೊಂಡಿದ್ದ ಆತ, ಪತ್ನಿ–ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ದಿದ್ದ. ಆದರೆ, ಅಲ್ಲಿ ಅವಕಾಶ ಸಿಗಲಿಲ್ಲವೆಂದು ವಾಪಸ್ ಊರಿಗೆ ಕರೆ ತಂದು ಬಿಟ್ಟು ಒಬ್ಬನೇ ತಿಂಗಳ ಹಿಂದೆ ಹೋಗಿದ್ದ. ಈ ನಡುವೆ ಬಿಎಸ್‌ಎಫ್‌ ಅಧಿಕಾರಿಗಳು ಅವರ ಅಣ್ಣನಿಗೆ ಭಾನುವಾರ ರಾತ್ರಿ ಕರೆ ಮಾಡಿ, ಸತ್ಯಪ್ಪ ನಾಲ್ವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಮೃತದೇಹ ಕಳುಹಿಸಿಕೊಡಲಾಗುವುದು ಎಂದಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಬಹಳ ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ಗಳಿಸಿದ್ದ. ಬಿ.ಇಡಿ ಪದವಿ ಮಾಡಿದ್ದರಿಂದ ಶಿಕ್ಷಕ ಆಗುತ್ತಾನೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ, ಮನೆಯ ಪರಿಸ್ಥಿತಿ ಸರಿ ಇಲ್ಲವಾದ್ದರಿಂದ ಬಿಎಸ್‌ಎಫ್‌ ಕೆಲಸಕ್ಕೆ ಸೇರಿಕೊಂಡಿದ್ದ’ ಎಂದು ತಿಳಿಸಿದರು.

‘ಸತ್ತೆಪ್ಪನ ಮಾನಸಿಕ ಸ್ಥಿತಿ ಸರಿ ಇರಲಿಲ್ಲ; ಚಿಕಿತ್ಸೆ ಕೊಡಿಸಲಾಗಿದೆ ಎನ್ನುವುದಕ್ಕೆ ದಾಖಲೆಗಳನ್ನು ಬಿಎಸ್ಎಫ್‌ನವರಿಗೆ ನೀಡಿದ್ದೆವು. ಖಿನ್ನತೆಗೆ ಒಳಗಾಗಿದ್ದ ಅವನಿಗೆ ಬಂದೂಕು ಕೊಟ್ಟರೇಕೆ ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲಿ ನಿಜವಾಗಿಯೂ ನಡೆದಿರುವುದೇನು ಎನ್ನುವುದು ಕೂಡ ಸ್ಪಷ್ಟವಾಗಿ ಗೊತ್ತಿಲ್ಲ. ಅವರ ಮಕ್ಕಳಿನ್ನೂ ಚಿಕ್ಕವು. ಆ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.