ADVERTISEMENT

ಯಮಕನಮರಡಿ | ಮೂಲಸೌಕರ್ಯ ವಂಚಿತ ವಸತಿ ಗೃಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 4:16 IST
Last Updated 18 ಜನವರಿ 2024, 4:16 IST
ಯಮಕನಮರಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಪಾಳುಬಿದ್ದ ಬಿಎಸ್ಎನ್ಎಲ್ ಕಚೇರಿ ಕಟ್ಟಡ
ಯಮಕನಮರಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಪಾಳುಬಿದ್ದ ಬಿಎಸ್ಎನ್ಎಲ್ ಕಚೇರಿ ಕಟ್ಟಡ   

ಯಮಕನಮರಡಿ: ಗ್ರಾಮದ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಕಚೇರಿ ಮತ್ತು ಸಿಬ್ಬಂದಿಗಾಗಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಹಲವು ವರ್ಷಗಳಿಂದ ಪಾಳು ಬಿದ್ದಿದೆ.

ಹತ್ತರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಠಾಣೆಯ ಪಕ್ಕದಲ್ಲಿ ಕಚೇರಿ ಇದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಾಗಿ ವಸತಿ ವ್ಯವಸ್ಥೆ ನಿರ್ಮಿಸಲಾಗಿತ್ತು. ಕೇಂದ್ರ ಸರ್ಕಾರದ ‘ಸ್ವಯಂ ನಿವೃತ್ತಿ’ ಆಯ್ಕೆಯನ್ನು ಸಿಬ್ಬಂದಿ ಪಡೆದುಕೊಂಡ ನಂತರ ಈ ವಸತಿಗೃಹಗಳಲ್ಲಿ ಬಿಎಸ್ಎನ್ಎಲ್ ಸಿಬ್ಬಂದಿ ವಾಸವಾಗಿಲ್ಲ. ಆದ್ದರಿಂದ ಮೂಲಸೌಕರ್ಯ ಒದಗಿಸುವ ಗೋಜಿಗೆ ಇಲಾಖೆ ಹೋಗಿಲ್ಲ.

‘ನಾಲ್ಕು ವಸತಿ ಗೃಹಗಳ ಪೈಕಿ ಎರಡರಲ್ಲಿ ಪೋಲೀಸರು ವಾಸವಿದ್ದು, ಅಲ್ಲಿ ಮೂಲಸೌಕರ್ಯ ಇಲ್ಲ. ಮತ್ತೆರಡು ಖಾಲಿ ಇವೆ. ಅವುಗಳನ್ನೂ ಬಾಡಿಗೆ ಕೊಡಬಹುದಿತ್ತು. ಸರ್ಕಾರದ ಹಣ ಪೋಲಾಗುತ್ತಿದೆ’ ಎಂಬುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ADVERTISEMENT

ಆಧಾರ್ ಕೇಂದ್ರ ಸ್ಥಗಿತ: ಯಮಕನಮರಡಿ ಗ್ರಾಮವು ಮೊದಲಿನಿಂದಲೂ ವ್ಯಾಪಾರ ಕೇಂದ್ರವಾಗಿದ್ದು, ಶಿಕ್ಷಣ ಸಂಸ್ಥೆಗಳು, ಸಹಕಾರ ಸಂಘಗಳು ಬೆಳೆದಿವೆ. ಇದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ.

8 ತಿಂಗಳ ಹಿಂದೆ ಬಿಎಸ್ಎನ್ಎಲ್ ಕೇಂದ್ರದಲ್ಲಿ ಆಧಾರ್ ನೋಂದಣಿ ಕೇಂದ್ರ ಆರಂಭಿಸಲಾಗಿತ್ತಾದರೂ ಕೆಲವೇ ತಿಂಗಳಲ್ಲಿ ಅದು ಸ್ಥಗಿತಗೊಂಡಿತು. ಅದಲ್ಲದೆ, ಬಿಎಸ್ಎನ್ಎಲ್ ಸಿಮ್ ಬೇಕಾದರೆ ಹುಕ್ಕೇರಿ, ಸಂಕೇಶ್ವರ ಹಾಗೂ ಬೆಳಗಾವಿ ಹೋಗಿ ಪಡೆಯುವ ಸನ್ನಿವೇಶ ಒದಗಿದೆ.

‘ಜೆಟಿಒ, ಎಸ್‌ಡಿಇ ಹುದ್ದೆಯ ಅಧಿಕಾರಿಗಳು ಇಲ್ಲ. ಸದ್ಯ ಒಬ್ಬ ತಾಂತ್ರಿಕ ಸಿಬ್ಬಂದಿ ಮಾತ್ರ ಇರುವುದರಿಂದ ಗ್ರಾಹಕರಿಗೆ ಸೇವೆ ಸಿಗದಂತಾಗಿದೆ’ ಎಂದು ಯಮಕನಮರಡಿ ಗ್ರಾಮದ ನಿವಾಸಿ ಮಹಾಂತೇಶ ಗಿಡ್ಡನವರ ಆರೋಪಿಸಿದರು.

‘ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ಹಾಳಾಗದಂತೆ ಸ್ವಚ್ಛಗೊಳಿಸಿ ಆಧಾರ ಕೇಂದ್ರ ಆರಂಭಿಸಿ, ಸಿಮ್ ಸಿಗುವಂತೆ ಮಾಡಿ, ಸಿಬ್ಬಂದಿ ನೇಮಕ ಮಾಡಬೇಕು ಹಾಗೂ ಬಾಡಿಗೆದಾರರಿಗೆ ಬೇಕಾಗುವ ಮೂಲಸೌಕರ್ಯ ಒದಗಿಸಬೇಕು. ಸಾರ್ವಜನಿಕ ಆಸ್ತಿ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ದಾದಬಾನಹಟ್ಟಿ ಗ್ರಾಮ ಪಂಚಾಯ್ತಿ ಸದಸ್ಯ ಮಹಾದೇವ ಮಜತಿ ಆಗ್ರಹಿಸಿದ್ದಾರೆ.

ಒಂದು ವಾರದಲ್ಲಿ ಯಮಕನಮರಡಿ ಕಚೇರಿಯ ಸಮಸ್ಯೆಯ ನಿವಾರಣೆಗೆ ಪ್ರಯತ್ನ ಮಾಡಲಾಗುವುದು
ವಿಕಾಸ ಜಯಕಾರ, ಪ್ರಧಾನ ವ್ಯವಸ್ಥಾಪಕ, ಬಿಎಸ್ಎನ್ಎಲ್ ಕಚೇರಿ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.