ADVERTISEMENT

ನಿಯಮ ಬಾಹಿರ ಬಡಾವಣೆಗಳಿಗೆ ಅನುಮತಿ ನೀಡಬೇಡಿ: ಸಚಿವ ಸತೀಶ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 15:48 IST
Last Updated 5 ಸೆಪ್ಟೆಂಬರ್ 2023, 15:48 IST
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಾಸಕರಾದ ಆಸೀಫ್‌ ಸೇಠ್‌, ಅಭಯ ಪಾಟೀಲ, ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಭಾಗವಹಿಸಿದ್ದರು
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಾಸಕರಾದ ಆಸೀಫ್‌ ಸೇಠ್‌, ಅಭಯ ಪಾಟೀಲ, ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಭಾಗವಹಿಸಿದ್ದರು   

ಬೆಳಗಾವಿ: ‘ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ(ಬುಡಾ) ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಹೊಸ ಬಡಾವಣೆಗಳಿಗೆ ಉದ್ಯಾನ, ರಸ್ತೆ, ಒಳಚರಂಡಿ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಅಧಿಕಾರಿಗಳೂ ಪರಿಶೀಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಿರ್ದೇಶನ ನೀಡಿದರು.

ಇಲ್ಲಿನ ಬುಡಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನಿಯಮ ಬಾಹಿರವಾಗಿರುವ ಬಡಾವಣೆಗಳಿಗೆ ಅನುಮತಿ ನೀಡಬಾರದು. ಅಧಿಕಾರಿಗಳು ಪರಿಶೀಲಿಸಿದ ನಂತರವೇ, ಪ್ರಾಧಿಕಾರದಿಂದ ಅನುಮೋದನೆ ನೀಡಬೇಕು’ ಎಂದು ಹೇಳಿದರು.

ನಿವೇಶನಗಳ ದರ ನಿಗದಿ, ಹಂಚಿಕೆ ಕುರಿತು ಮಾಹಿತಿ ಪಡೆದ ಸಚಿವರು, ಇ-ಹರಾಜು ಹಾಗೂ ಮ್ಯಾನ್ಯುವಲ್ ಹರಾಜು ಪ್ರಕ್ರಿಯೆ ವೇಳೆ ಪಾಲಿಸಬೇಕಿರುವ ನಿಯಮಗಳ ಬಗ್ಗೆ ಚರ್ಚಿಸಿದರು.

ADVERTISEMENT

‘ಬೆಳಗಾವಿ ನಗರದಲ್ಲಿ ವಿಶಾಲವಾದ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಾಗಿರುವ ಜಮೀನು ಗುರುತಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ಹೊಸ ಬಡಾವಣೆಗಳಲ್ಲಿ ಉದ್ಯಾನ, ಒಳಚರಂಡಿ, ರಸ್ತೆ, ವಿದ್ಯುತ್‌ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿರಬೇಕು. ಇವುಗಳನ್ನು ಒದಗಿಸದ ಬಡಾವಣೆಗಳಿಗೆ ಅನುಮತಿ ನೀಡಲೇಬಾರದು’ ಎಂದು ಹೇಳಿದರು.

ಶಾಸಕ ಅಭಯ ಪಾಟೀಲ, ‘ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯೋಜನೆಗಳು ಹಾಗೂ ಅವುಗಳಿಗೆ ಮಂಜೂರಾತಿ ನೀಡುವ ಕುರಿತು ಸಂಬಂಧಿತ ಶಾಸಕರ ಗಮನಕ್ಕೆ ತಂದು ನಿರ್ಣಯ ಕೈಗೊಳ್ಳಬೇಕು. ಈಗಾಗಲೇ ನಿರ್ಮಾಣಗೊಂಡ ಬಡಾವಣೆಗಳಲ್ಲಿ ನಿಯಮಾವಳಿ ಪಾಲನೆಯಾದ ಕುರಿತು ಸಮೀಕ್ಷೆ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ‘ಕಣಬರ್ಗಿ ಬಡಾವಣೆ ಅಭಿವೃದ್ಧಿಗೆ ₹87 ಕೋಟಿ ಅನುದಾನ ಮೀಸಲಿಡಲಾಗಿದೆ. ಇತರೆ ಅಭಿವೃದ್ಧಿ ಕೆಲಸಗಳಿಗೆ ₹9 ಕೋಟಿ ಅನುದಾನ ಲಭ್ಯವಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಹೊರತುಪಡಿಸಿ, ಉಳಿದ ಕಾಮಗಾರಿಗಳಿಗೆ ಅದನ್ನು ಬಳಸಬಹುದು’ ಎಂದರು. ಶಾಸಕ ಆಸೀಫ್‌ ಸೇಠ್‌ ಇತರರಿದ್ದರು.

ನಂತರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟಿನ ವ್ಯವಸ್ಥಾಪನಾ ಮತ್ತು ಆಡಳಿತ ಸಮಿತಿ ಸಭೆ ನಡೆಯಿತು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಆಸೀಫ್ ಸೇಠ್, ವಿಠ್ಠಲ ಹಲಗೇಕರ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಭಾಗವಹಿಸಿದ್ದರು.

ಈ ಸಭೆಗಳು ಮುಗಿದ ನಂತರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊಸ ವಾಹನದಲ್ಲಿ ಸತೀಶ ಜಾರಕಿಹೊಳಿ ತೆರಳಿ, ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಅಶೋಕ ನಗರದ ಕ್ರೀಡಾ ಸಂಕೀರ್ಣ ಬಳಿಯ ಜಾಗ ಪರಿಶೀಲಿಸಿದರು.

ಬೆಳಗಾವಿಯಲ್ಲಿನ ನೂರಾರು ಮನೆಗಳನ್ನು ಕಾನೂನು ಬಾಹಿರವಾಗಿ ತೆರವುಗೊಳಿಸಿ ಜನರಿಗೆ ಸಮಸ್ಯೆ ತಂದೊಡ್ಡಿದ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆ ಮನೆಗಳನ್ನು ಯಾವಾಗ ಯಾರು ನೆಲಸಮ ಮಾಡಿದರು ಎಂಬುದನ್ನು ತಿಳಿಯಬೇಕಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸುತ್ತೇವೆ
–ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.