ADVERTISEMENT

ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಮಳೆಯಿಂದ ಫಸಲು ಹಾನಿ; ಮಾರುಕಟ್ಟೆಗೆ ಆವಕ ಇಳಿಕೆ

ಇಮಾಮ್‌ಹುಸೇನ್‌ ಗೂಡುನವರ
Published 16 ನವೆಂಬರ್ 2024, 23:29 IST
Last Updated 16 ನವೆಂಬರ್ 2024, 23:29 IST
   

ಬೆಳಗಾವಿ: ಇಳುವರಿ ಕುಸಿತದಿಂದಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಸಿಹಿ ಗೆಣಸಿನ ಆವಕ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಧಾರಣೆ ಏರಿಕೆಯಾಗಿದೆ.

ಶನಿವಾರ ಸಿಹಿ ಗೆಣಸು ಕ್ವಿಂಟಲ್‌ಗೆ ₹1,500ರಿಂದ ₹2 ಸಾವಿರಕ್ಕೆ ಮಾರಾಟವಾಗಿದೆ. ಗುಣಮಟ್ಟದ ಗೆಣಸಿಗೆ ಕ್ವಿಂಟಲ್‌ಗೆ ₹2,300 ದರ ಸಿಕ್ಕಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಕ್ವಿಂಟಲ್‌ಗೆ ₹500ರಿಂದ ₹1,200 ದರಕ್ಕೆ ಮಾರಾಟವಾಗಿತ್ತು.

ಬೆಳಗಾವಿ ತಾಲ್ಲೂಕಿನ ಪಶ್ಚಿಮ ಭಾಗ ಮತ್ತು ಮಹಾರಾಷ್ಟ್ರದ ಚಂದಗಢ ತಾಲ್ಲೂಕಿನಲ್ಲಿ ಹೆಚ್ಚು ಗೆಣಸು ಬೆಳೆಯಲಾಗುತ್ತದೆ. ಈ ಗೆಣಸನ್ನು ದೆಹಲಿ, ಗೋವಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರಕ್ಕೆ ಪೂರೈಸಲಾಗುತ್ತದೆ.  

ADVERTISEMENT

2023-24ರಲ್ಲಿ ಬೆಳಗಾವಿ ಎಪಿಎಂಸಿಗೆ 3,68,396 ಕ್ವಿಂಟಲ್ ಗೆಣಸು ಆವಕವಾಗಿತ್ತು. ಕ್ವಿಂಟಲ್‌ಗೆ ₹300ರಿಂದ ₹3,900 ದರದಲ್ಲಿ ಮಾರಾಟವಾಗಿತ್ತು. ಇದೇ ವರ್ಷದ ಏಪ್ರಿಲ್‌ 1ರಿಂದ ಅಕ್ಟೋಬರ್‌ 31ರ ವರೆಗೆ 40,064 ಕ್ವಿಂಟಲ್ ಆವಕವಾಗಿದ್ದು, ₹700ರಿಂದ ₹4,200 ದರದಲ್ಲಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದರ ಹೆಚ್ಚಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

‘ಸತತ ಮಳೆಯಿಂದ ಗೆಣಸಿನ ಇಳುವರಿ ಕುಸಿದಿದೆ. ಮತ್ತೊಂದೆಡೆ ಉತ್ತರ ಭಾರತದ ರಾಜ್ಯಗಳಲ್ಲಿ ಗೆಣಸಿಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಸರಕು ಮಾರುಕಟ್ಟೆಗೆ ಬಾರದ್ದರಿಂದ ದರ ಹೆಚ್ಚಿದೆ’ ಎಂದು ವ್ಯಾಪಾರಿ
ಅಶೋಕ ಗಾವಡಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನವೆಂಬರ್‌ 13ರಂದು ಕ್ವಿಂಟಲ್‌ಗೆ ₹2,800ರವರೆಗೆ ಮಾರಾಟವಾಗಿತ್ತು. ಪ್ರತಿದಿನ ದರದಲ್ಲಿ ವ್ಯತ್ಯಾಸ ಆಗುತ್ತದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗಬಹುದು’ ಎಂದು ಹೇಳಿದರು. 

‘4 ಎಕರೆಯಲ್ಲಿ ಗೆಣಸು ಬೆಳೆದಿದ್ದೇನೆ. ಪ್ರತಿ ಎಕರೆಯಲ್ಲಿ 120 ಚೀಲ (ತಲಾ 60 ಕೆ.ಜಿ) ಇಳುವರಿ ಬರುತ್ತಿತ್ತು. ಈ ಬಾರಿ 70ರಿಂದ 80 ಚೀಲ ಇಳುವರಿ ಬಂದಿದೆ. ಸತತ ಮಳೆಯಿಂದ ಬೆಳೆ ಹಾನಿಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿರುವುದು ಸಮಾಧಾನ ತಂದಿದೆ’ ಎಂದು ಬೆಳಗಾವಿ ತಾಲ್ಲೂಕಿನ ಬಡಸ (ಇನಾಮ) ಗ್ರಾಮದ ರೈತ ರಾಮು ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.