ಬೆಳಗಾವಿ: ‘ನಮ್ಮ ಅಸ್ಮಿತೆಯಾಗಿರುವ ಕನ್ನಡ ಬಾವುಟ ಸುಟ್ಟಿರುವುದು ಅಕ್ಷಮ್ಯ ಅಪರಾಧ. ಈ ಕೃತ್ಯ ಎಸಗಿದ ಹೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಒತ್ತಾಯಿಸಿದರು.
ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಹಾಗೂ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮಹಾಮೇಳಾವ ಆಯೋಜಿಸುವುದು ಸರಿಯಲ್ಲ. ಗಡಿಯಲ್ಲಿ ಕನ್ನಡಿಗರನ್ನು ಕೆರಳಿಸುತ್ತಿರುವ ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.
‘ಗಡಿನಾಡಿನಲ್ಲಿ ಕನ್ನಡಿಗರು–ಮರಾಠಿಗರು ಒಂದಾಗಿ ಬದುಕುತ್ತಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಐತಿಹಾಸಿಕ ಹಾಗೂ ಭಾವನಾತ್ಮಕ ಸಂಬಂಧವಿದೆ. ಆದರೆ, ಅವಿವೇಕಿಗಳು ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಎಂಇಎಸ್‌ನ ಪುಂಡಾಟಿಕೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ರಕ್ಷಣೆ, ಅಭಿವೃದ್ಧಿ ಹಾಗೂ ಪ್ರಸಾರವೇ ಕ.ಸಾ.ಪ. ಮೂಲ ಉದ್ದೇಶವಾಗಿದೆ. ಗಡಿ ಭಾಗದ ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸಲಾಗುವುದು’ ಎಂದ ಅವರು, ‘ಕನ್ನಡದ ಬೆಳವಣಿಗೆಗೆ ಶ್ರಮಿಸಿದ ಮಹನೀಯರ ಹೆಸರನ್ನು ಆಯಾ ಗ್ರಾಮದ ಬಸ್ ತಂಗುದಾಣಗಳಿಗೆ ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.
ಅಧಿಕಾರ ಸ್ವೀಕರಿಸಿದ ಮಂಗಲಾ ಮೆಟಗುಡ್ಡ ಮಾತನಾಡಿ, 'ಜಿಲ್ಲೆಯಲ್ಲಿ ಅಪೂರ್ಣ ಹಂತದಲ್ಲಿರುವ ಕನ್ನಡ ಭವನಗಳ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ಕನ್ನಡ ಭವನ ಕಟ್ಟಲು ಆರ್ಥಿಕ ನೆರವು ಒದಗಿಸಬೇಕು. ಜಿಲ್ಲೆಯ ಸಾಹಿತಿಗಳ ಸಾಕ್ಷ್ಯಚಿತ್ರ ನಿರ್ಮಿಸಬೇಕು’ ಎಂದು ಕೋರಿದರು.
ಮಹಾಂತೇಶ ಮೆಣಸಿನಕಾಯಿ ಅವರ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಕೃತಿ ಹಾಗೂ ಸುನೀಲ ಸಾಣಿಕೊಪ್ಪ ಅವರ ‘ಬಯಲು ಗೀತೆ’ ಕವನಸಂಕಲನ ಲೋಕಾರ್ಪಣೆಗೊಳಿಸಲಾಯಿತು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಗೋವಾ ಕನ್ನಡ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹೊಸಮನಿ, ಯ.ರು. ಪಾಟೀಲ, ಮೋಹನ ಪಾಟೀಲ, ವಿ.ಎಂ. ಅಂಗಡಿ ಇದ್ದರು.
ಕ.ಸಾ.ಪ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ ಮಹೇಶ ಜೋಶಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶ್ರೀಕೃಷ್ಣದೇವರಾಯ ವೃತ್ತದಿಂದ ಬಸವರಾಜ ಕಟ್ಟಿಮನಿ ಸಭಾಂಗಣದವರೆಗೆ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ರಾಣಿ ಚನ್ನಮ್ಮನ ಪ್ರತಿಮೆಗೆ ಜೋಶಿ ಮಾಲಾರ್ಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.