ಅಥಣಿ: ‘ಉಪಚುನಾವಣೆಯಲ್ಲಿ ಗೆದ್ದರೆ ಮಹೇಶ ಕುಮಠಳ್ಳಿ ಅವರಿಗೂ ಸಚಿವ ಸ್ಥಾನ ನೀಡಲಾಗುವುದು. ಈಗಾಗಲೇ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಜೊತೆ ಸಚಿವ ಸ್ಥಾನವನ್ನೂ ನೀಡಲಾಗಿದ್ದು, ಒಂದೇ ಕ್ಷೇತ್ರದ ಇಬ್ಬರು ನಾಯಕರಿಗೆ ಸಚಿವ ಸ್ಥಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ಜೆ.ಎ. ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಮಹೇಶ ಕುಮಠಳ್ಳಿ ಸೇರಿದಂತೆ 17 ಜನ ಶಾಸಕರ ತ್ಯಾಗದಿಂದಾಗಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಯಾವುದೇ ಮೋಸವಾಗದಂತೆ ನ್ಯಾಯದೊರಕಿಸಿ ಕೊಡಬೇಕಾದದ್ದು ನಮ್ಮ ಕರ್ತವ್ಯ’ ಎಂದರು.
‘ ಇದು ಕುಮಠಳ್ಳಿ ಅವರ ಚುನಾವಣೆಯಲ್ಲ. ಲಕ್ಷ್ಮಣ ಸವದಿ ಹಾಗೂ ನನ್ನ ಚುನಾವಣೆಯಾಗಿದ್ದು ಕಾರ್ಯಕರ್ತರೆಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನಾವೆಲ್ಲರೂ ಸೇರಿ ನೆರೆ ಸಂತ್ರಸ್ತರ ಬಳಿ ತೆರಳಿ, ಪರಿಹಾರ ಒದಗಿಸಲು ಕ್ರಮಕೈಗೊಳ್ಳೋಣ’ ಎಂದರು.
‘ಅಥಣಿ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಾದ ಸವಳು– ಜವಳು, ಪ್ರವಾಹ ನಿರಾಶ್ರಿತರಿಗೆ ನೆರೆ ಪರಿಹಾರ, ಪೂರ್ವ ಭಾಗದ 7 ಹಳ್ಳಿಗಳ ಕೊಟ್ಟಲಗಿ ಯಾತ ನೀರಾವರಿ ಯೋಜನೆ, ಹಿಪ್ಪರಗಿ ಯಾತ ನೀರಾವರಿ ಯೋಜನೆ ಅನುಷ್ಠಾನಗೊಳಿಸು ಕ್ರಮ ಕೈಗೊಳ್ಳಲಾಗುವುದು. ಜನವಾಡ, ಹುಲಗಬಾಳಿ, ರಾಮವಾಡಿ ಮತ್ತು ಕರ್ಲಟ್ಟಿ ಸೇರಿದಂತೆ ಮುಳುಗಡೆಯಾದ ಗ್ರಾಮಗಳನ್ನು ಸಂತ್ರಸ್ತರು ಬಯಸಿದರೆ ಸ್ಥಳಾಂತರ ಮಾಡಲಾಗುವುದು. ಸಂತ್ರಸ್ತರಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಹಾಗೂ ಮೂರು ಬಾರಿ ಕಾಗವಾಡ, ಅಥಣಿ ವಿಧಾನಸಭೆಗೆ ಸ್ಪರ್ಧಿಸಿದ್ದ ಕಿರಣಗೌಡ ಪಾಟೀಲ ಅವರು ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.