ಬೆಳಗಾವಿ: ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ನಗರದಲ್ಲಿ ಸಂಕಷ್ಟಕ್ಕೀಡಾಗಿದ್ದ ಆರು ಒಂಟೆಗಳನ್ನು ರಕ್ಷಿಸಲಾಗಿದೆ.
ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಅವರು ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ವ್ಯವಹರಿಸಿ, ಅವುಗಳನ್ನು ಲಾರಿಯಲ್ಲಿ ಮಹಾರಾಷ್ಟ್ರದ ಪುಣೆಗೆ ಸಾಗಿಸುವ ವ್ಯವಸ್ಥೆ ಮಾಡಿಸಿದ್ದಾರೆ.
ಜನರ ಮನರಂಜನೆಗಾಗಿ ಹಾಗೂ ಮಕ್ಕಳು ಅಥವಾ ಆಸಕ್ತರನ್ನು ಮೇಲೆ ಕೂರಿಸಿ ಸುತ್ತಾಡಿಸಿ ಹಣ ಸಂಪಾದಿಸುವುದಕ್ಕಾಗಿ ಕೆಲವರು ಏಳು ಒಂಟೆಗಳನ್ನು ಇಲ್ಲಿಗೆ ತಂದಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಅವುಗಳನ್ನು ಬಡಾವಣೆಯಲ್ಲಿ ಸುತ್ತಾಡಿಲು ಹಾಗೂ ಗಳಿಸಲು ಆಗಿರಲಿಲ್ಲ. ಆಹಾರ ಹೊಂದಿಸುವುದು ಮತ್ತು ಆರೋಗ್ಯದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ತಂದಿದ್ದವರು ಆದಾಯವಿಲ್ಲದೆ ತೊಂದರೆ ಅನುಭವಿಸಿದ್ದರು. ಬಾಕ್ಸೈಟ್ ರಸ್ತೆಯ ಹಿಂಡಾಲ್ಕೊ ಬಳಿಯ ಕೆಳಸೇತುವೆಯಲ್ಲಿ ಬೀಡುಬಿಟ್ಟಿದ್ದರು. ಒಂಟೆಗಳ ಪಾಲನೆ ಜೊತೆಗೆ ತಮ್ಮ ಜೀವನ ನಿರ್ವಹಣೆಗೆ ಪರದಾಡುತ್ತಿದ್ದರು. ಈ ನಡುವೆ, ಒಂದು ಒಂಟೆ ಮೃತಪಟ್ಟಿತ್ತು.
ನ್ಯಾಯಾಲಯದ ಆದೇಶ ಮತ್ತು ಕಾನೂನು ಪ್ರಕಾರ ಈ ರೀತಿ ಪ್ರಾಣಿಗಳನ್ನು ಮನರಂಜನೆಗೆ ಬಳಸುವುದನ್ನು ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸರ್ಕಾರೇತರ ಸಂಘ–ಸಂಸ್ಥೆ ಬಿಎಆರ್‌ಸಿ (ಬೆಳಗಾವಿ ಪ್ರಾಣಿ ರಕ್ಷಣೆ ಮತ್ತು ಆರೈಕೆ) ಸದಸ್ಯರು ಈ ಒಂಟೆಗಳನ್ನು ಪುಣೆಯ ಎಪಿಎಂಸಿಗೆ ಸಾಗಿಸಿದ್ದಾರೆ. ಕ್ರೇನ್ ಬಳಸಿ ಒಂಟೆಗಳನ್ನು ಲಾರಿಗೆ ಹತ್ತಿಸಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಸೋನಾಲಿ ನೇತೃತ್ವ ವಹಿಸಿದ್ದರು.
ಈ ಒಂಟೆಗಳನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿಗಳು ಗುರುವಾರ ಪ್ರತಿಭಟನೆಯಲ್ಲೂ ಬಳಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.