ಬೆಳಗಾವಿ: 'ನನ್ನನ್ನು ಮುಟ್ಟಿದರೆ ಜನ ಸುಮ್ಮನೇ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸಿ.ಎಂ ಅವರನ್ನು ಯಾರಾದರೂ ಮುಟ್ಟಲು ಆಗುತ್ತದೆಯೇ? ಅವರ ಮಾತಿನ ಮರ್ಮವನ್ನು ಅವರೇ ಅರ್ಥ ಮಾಡಿಕೊಳ್ಳಬೇಕು' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವ್ಯಂಗ್ಯ ಮಾಡಿದರು.
ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, 'ಸಿ.ಎಂ ಆದವರನ್ನು ಯಾರಾದರೂ ಮುಟ್ಟಿದರೆ ಪೊಲೀಸರು ಕೇಸ್ ಮಾಡಿ ಒಳಗೆ ಹಾಕುತ್ತಾರೆ. ಮುಟ್ಟಲು ಆಗುವುದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಜನರ ಭಾವನೆ ಕೆರಳಿಸುವಂತೆ ಮಾತಾಡುವುದು ಎಷ್ಟು ಸರಿ ಎಂಬುದನ್ನು ಅವರಿಗೇ ಬಿಡುತ್ತೇನೆ' ಎಂದರು.
'ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗ ನಿರ್ಮಾಣ ಪ್ರಯತ್ನಗಳು ನಡೆದಿವೆ. ಜಿಲ್ಲಾಧಿಕಾರಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಭೂ ಸ್ವಾಧೀನ ಸಮಸ್ಯೆ ಆಗಿದ್ದರಿಂದ ವಿಳಂಬವಾಗಿದೆ. ಸದ್ಯ ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು, ರೈಲ್ವೆ ಅಧಿಕಾರಿಗಳ ಸಭೆ ನಡೆಸುತ್ತೇನೆ' ಎಂದರು.
'ಲೋಕಾಪುರ- ಧಾರವಾಡ ರೈಲು ಮಾರ್ಗದ ಕಾಮಗಾರಿಯನ್ನೂ ಪರಿಶೀಲಿಸಲು ಬಂದಿದ್ದೇನೆ. ಈ
ರೈಲು ಮಾರ್ಗಗಳು ದಿವಂಗತ ಸುರೇಶ ಅಂಗಡಿ ಅವರ ಕನಸಾಗಿದ್ದವು. ನಮ್ಮ ಸರ್ಕಾರದ ಇದೇ ಅವಧಿಯಲ್ಲಿ ಇವುಗಳನ್ನು ಪೂರ್ಣ ಮಾಡುತ್ತೇವೆ. ಪ್ರಧಾನಿ ಮೋದಿ ಅವರೂ ಈ ನಿರ್ಧಾರ ಮಾಡಿದ್ದಾರೆ' ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.