ಮೂಡಲಗಿ: ಮೂಡಲಗಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಬುಧವಾರ ಮುಸ್ಸಂಜೆ ಹೊತ್ತಲ್ಲಿ ತಣ್ಣನೆ ಸೂಸುವ ತಂಗಾಳಿಯಲ್ಲಿ ನೂರಾರು ಆಕಾಶಬುಟ್ಟಿಗಳನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಜನರು ಸಂಭ್ರಮಪಟ್ಟರು.
ದೀಪ ಹೊತ್ತ ತರಾವರಿಯ ಬಣ್ಣ ಬಣ್ಣದ ಆಕಾಶಬುಟ್ಟಿಗಳು ಆಕಾಶದಲ್ಲಿ ಮಂದ ಕತ್ತಲಲ್ಲಿ ತೇಲಿ ಹೋಗುತ್ತಿದ್ದಂತೆ ಸೇರಿದ ನೂರಾರು ಜನರ ಮೊಗದಲ್ಲಿ ಮಂದಹಾಸದ ನಗು. ಆಕಾಶದಲ್ಲಿ ಒಂದರ ಹಿಂದೆ ಒಂದರಂತೆ ಬಾನಾಡಿಗಳಂತೆ ನೂರಾರು ಆಕಾಶಬುಟ್ಟಿಗಳ ಕಲರವವು ಎಲ್ಲರ ಮೊಗದಲ್ಲಿ ಖುಷಿ ಉಡಾಯಿಸಿತು.
ಬಾಲಕರಿಂದ ಹಿಡಿದು ವಯೋವೃದ್ಧರು, ಜಾತಿ,ಮತ,ಭೇದ ಇಲ್ಲದೆ ಎಲ್ಲ ಸಮಾಜದ ಜನರು ಭಾಗವಹಿಸಿದ್ದರು. ಆಹಾಶಬುಟ್ಟಿಗಳು ಮುಗಿಲ ಕಡೆಗೆ ನೆಗೆಯುತ್ತಿದ್ದಂತೆ ಸೇರಿದ ಜನರೆಲ್ಲ ಶಿಳ್ಳೆ, ಚಪ್ಪಾಳೆ, ಕೇಕೇ ಹಾಕಿ ಸಂಭ್ರಮಿಸಿದರು.
ಕಿತ್ತೂರ ಚನ್ನಮ್ಮನ 200ನೇ ವರ್ಷದ ವಿಜಯೋತ್ಸವದ ಅಂಗವಾಗಿ ಸ್ಥಳೀಯ ನಿಸರ್ಗ ಫೌಂಡೇಷನ್‌ನಿಂದ ಆಕಾಶಬುಟ್ಟಿ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಫೌಂಡೇಷನ್ ಅಧ್ಯಕ್ಷ ಈರಪ್ಪ ಢವಳೇಶ್ವರ ಮಾತನಾಡಿ ‘ಚನ್ನಮ್ಮನ ಶೌರ್ಯವನ್ನು ಯಾರೂ ಮರೆಯುವಂತಿಲ್ಲ. ಅಂಥ ಅಪ್ರತಿಮ ಮಹಿಳೆ ಹೋರಾಟದ ವಿಜಯದ ದ್ವಿಶತಮಾನ ನೆನಪಿಗಾಗಿ ಆಕಾಶಬುಟ್ಟಿ ಹಾರಿಬಿಡುವ ಮೂಲಕ ಸಂಭ್ರಮಿಸಿದೆವು’ ಎಂದರು.
ಕಾರ್ಯಕ್ರಮವನ್ನು ಬಿಇಒ ಅಜಿತ್ ಮನ್ನಿಕೇರಿ ಉದ್ಘಾಟಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನವರ, ಪುರಸಭೆ ಸದಸ್ಯ ಶಿವಾನಂದ ಚಂಡಕಿ, ಸಂಗಮೇಶ ಕೌಜಲಗಿ, ವಕೀಲ ಲಕ್ಷ್ಮಣ ಅಡಿಹುಡಿ,ಅವರಾದಿಯ ಪ್ರಕಾಶ ಕಾಡಶೆಟ್ಟಿ, ಸಂಘಟಕರಾದ ಮಲ್ಲು ಬೋಳನ್ನವರ, ಗುರು ಗಂಗಣ್ಣವರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.