ಬೆಳಗಾವಿ: ‘ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ. ಈ ಮೊದಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದಂತೆ, ಕಾಮಗಾರಿಗಳ ಪ್ರಗತಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಬೆಳಗಾವಿ ವಿಭಾಗದಲ್ಲಿ 4 ಕಾಮಗಾರಿಗಳು ಹಾಗೂ ಚಿಕ್ಕೋಡಿ ವಿಭಾಗಗಳಲ್ಲಿ 8 ಕಾಮಗಾರಿಗಳಿವೆ. ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅವರಾದಿ, ದೇಗಾಂವ, ಯರಝರ್ವಿ ಮತ್ತು ಹಾಲಬಾಂವಿ ಹಾಗೂ ಚಿಕ್ಕೋಡಿ ವಿಭಾಗದಲ್ಲಿ ಸತ್ತಿ, ಕೆಂಪಟ್ಟಿ, ಬಿರನಾಳ, ಮೆಳವಂಕಿ, ಅಪ್ಪಾಚಿವಾಡಿ, ದಡ್ಡಿ, ಪಾಚ್ಚಾಪೂರ ಮತ್ತು ಚಿಕ್ಕೂಡ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಆರ್ಥಿಕ ಮತ್ತು ಭೌತಿಕವಾಗಿ ಪ್ರಗತಿ ಸಾಧಿಸಲು ಕಾರ್ಯಪಾಲಕ ಎಂಜಿನಿಯರ್‌ಗಳು ಆಸ್ಥೆ ವಹಿಸಬೇಕು. ಸದರಿ ಕಾಮಗಾರಿಗಳಲ್ಲಿ ಅರಣ್ಯ, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ನೀರಾವರಿ ಇಲಾಖೆಗಳ ಅನುಮೋದನೆ ಕುರಿತು ಸ್ಪಷ್ಟತೆ ನೀಡಲಾಗಿದೆ’ ಎಂದೂ ಅವರು ತಿಳಿಸಿದರು.
‘ಚಿಕ್ಕೋಡಿ ವಿಭಾಗದ ಅಪ್ಪಾಚಿವಾಡಿ, ಕೆಂಪಟ್ಟಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದೆ ಇದ್ದ ಸಂದರ್ಭದಲ್ಲಿ, ಟೆಂಡುಗಳನ್ನು ರದ್ದು ಗೊಳಿಸಲಾಗುವುದು’ ಎಂದೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ಕಾರ್ಯಪಾಲಕ ಎಂಜಿನಿಯರ್‌ಗಳಾದ ಶಶಿಕಾಂತ ನಾಯಕ, ಪಾಂಡುರಂಗ ರಾವ್ ಚಿಕ್ಕೋಡಿ ವಿಭಾಗ, ಎಸ್.ಬಿ.ಕೋಳಿ (ಪಂಚಾಯತರಾಜ್), ಪ್ರವೀಣ ಮಠಪತಿ, ಕೆ.ಆರ್.ಡಿ.ಸಿ.ಎಲ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ನೈರುತ್ಯ ರೈಲ್ವೆ ವಲಯ ಸೇರಿದಂತೆ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.