ಬೆಳಗಾವಿ: ಖ್ಯಾತ ರಂಗ ಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ಸಾಹಿತಿ ಚಂದ್ರಶೇಖರ ಪಾಟೀಲ ಅವರಿಗೆ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಿಂದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ಗಜಾನನ ನಾಯ್ಕ, ‘ಬಸವಲಿಂಗಯ್ಯ ಅವರು ರಂಗಶಿಕ್ಷಣವನ್ನು ನಿನಾಸಂನಲ್ಲಿ ಪಡೆದು, ಉತ್ತರ ಕರ್ನಾಟಕದ ಗಮನಾರ್ಹ ಜಾನಪದ ರಂಗಕಲಾವಿದರಾಗಿದ್ದರು. ಸುಗಮ ಸಂಗೀತ, ರಂಗಗೀತೆಗಳನ್ನು ಮತ್ತು ಕುಲಗೋಡದ ಅಪರಾಳ ತಮ್ಮಣ್ಣ, ಶ್ರೀಕೃಷ್ಣ ಪಾರಿಜಾತ, 12 ತಾಸಿನ ನಾಟಕವನ್ನು ಮೂರು ತಾಸಿಗೆ ತಂದು ಜನಮನ್ನಣೆ ಪಡೆದಿದ್ದ ಕಂಚಿನ ಕಂಠದ ಗಾಯಕರಾಗಿದ್ದರು. ಹಲವು ಪ್ರಶಸ್ತಿಗೆ ಭಾಜನವಾಗಿದ್ದರು. ಅವರ ಅಗಲಿಕೆಯಿಂದ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಕಂಬನಿ ಮಿಡಿದರು.
‘ಚಂಪಾ ಅವರು ಕನ್ನಡ ನಾಡು–ನುಡಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಅವರ ಸೇವೆ ಅನುಪಮವಾದುದು. ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದುವುದೇ ನಿಜವಾದ ಶ್ರದ್ಧಾಂಜಲಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಪ್ರೊ.ಎಸ್.ಎಂ. ಗಂಗಾಧರಯ್ಯ, ‘ನಮ್ಮನ್ನು ಅಗಲಿದ ಇಬ್ಬರೂ ಮಹಾನ್ ವ್ಯಕ್ತಿಗಳು ಅತ್ಯಂತ ಬಡ ಕುಟುಂಬದಿಂದ ಬಂದವರು. ಬಸವಲಿಂಗಯ್ಯ ಅವರಿಂದ ಜಾನಪದ ಸಾಂಸ್ಕೃತಿಕ ಲೋಕ ಇನ್ನಷ್ಟು ಬೆಳಗುತ್ತಿತ್ತು. ಚಂಪಾ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಇಂಗ್ಲಿಷ್‌ನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಭಾಷಾ ವಿಜ್ಞಾನದ ಕುರಿತಾಗಿ ಅಧ್ಯಯನ ಮಾಡಿದರು. ಸಂಕ್ರಮಣ ಪತ್ರಿಕೆಯನ್ನು ಕೊನೆಯವೆರಗೂ ಮುಂದುವರಿಸಿಕೊಂಡು ಬಂದರು’ ಎಂದು ಸ್ಮರಿಸಿದರು.
ಡಾ.ಮಹೇಶ ಗಾಜಪ್ಪನವರ, ಡಾ.ಶೋಭಾ ನಾಯಕ ಹಾಗೂ ಡಾ.ಅಶೋಕ ಮುಧೋಳ ಉಪಸ್ಥಿತರಿದ್ದರು.
ವಿಠ್ಠಲ ಹರಿಜನ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.