ADVERTISEMENT

ಚನ್ನಮ್ಮನ ಕಿತ್ತೂರು: ಉದ್ಘಾಟನೆಗೆ ಕಾದಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ

ಪ್ರದೀಪ ಮೇಲಿನಮನಿ
Published 11 ನವೆಂಬರ್ 2024, 4:13 IST
Last Updated 11 ನವೆಂಬರ್ 2024, 4:13 IST
ಚನ್ನಮ್ಮನ ಕಿತ್ತೂರಿನಲ್ಲಿ ನಿರ್ಮಿಸಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ
ಚನ್ನಮ್ಮನ ಕಿತ್ತೂರಿನಲ್ಲಿ ನಿರ್ಮಿಸಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ   

ಚನ್ನಮ್ಮನ ಕಿತ್ತೂರು: ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ತಿ ಮುಗಿದಿದೆ. ಬಣ್ಣ ಬಳಿದು ಅಂದಗೊಳಿಸಲಾಗಿದೆ. ಆದರೆ, ಇದಕ್ಕಿನ್ನೂ ಮುಹೂರ್ತ ಕೂಡಿಬಂದಿಲ್ಲ. ಉದ್ಘಾಟನೆಗೆ ದಿನಗಳನ್ನು ಎಣಿಸುತ್ತ ನಿಂತಿದೆ!

ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದ ವ್ಯಥೆ ಇದು.

ಅನೇಕ ಕಡೆ ಹುದ್ದೆ ಸೃಷ್ಟಿ ಮಾಡಲಾಗಿರುತ್ತದೆ. ಕಟ್ಟಡವಿಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿ ಪರದಾಡುತ್ತಿರುತ್ತಾರೆ. ಇಲ್ಲಿ ಎಲ್ಲವೂ ತಿರುವು ಮುರುವು. ಸುಸಜ್ಜಿತ ಕಟ್ಟಡವಿದೆ. ಆದರೆ, ಹುದ್ದೆ ಮಾತ್ರ ಸೃಷ್ಟಿಯಾಗಿಲ್ಲ.

ADVERTISEMENT

ತಾಲ್ಲೂಕು ಕೇಂದ್ರವಾಗಿರುವ ಕಿತ್ತೂರಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆ ಅಗತ್ಯವಿದೆ. ಆದರೆ, ಸರ್ಕಾರ ಈ ಭಾಗ್ಯ ಕರುಣಿಸದೆ ಇರುವುದು ರೈತರ ಅಸಮಾಧಾನಕ್ಕೂ ಕಾರಣವಾಗಿದೆ. ‘ಬೈಲಹೊಂಗಲ ಕಚೇರಿ ಅವಲಂಬನೆ ತಪ್ಪಿಸಬೇಕಿದೆ’ ಎನ್ನುತ್ತಾರೆ ಅವರು.

ಕಷ್ಟವಾಗಿರುವ ಕಚೇರಿ ಅನುಷ್ಠಾನ: 

‘ಕಿತ್ತೂರು ತಾಲ್ಲೂಕು ಕೇಂದ್ರ ಘೋಷಣೆಯಾಗಿ ದಶಕ ಉರುಳಿದೆ. ತಹಶೀಲ್ದಾರ್ ಹುದ್ದೆ ಸೃಜಿಸಿ ಬರುವ ಡಿಸೆಂಬರ್‌ಗೆ ಭರ್ತಿ 7 ವರ್ಷ. ತಾಲ್ಲೂಕಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ತಾಲ್ಲೂಕು ಕಚೇರಿಗಳ ಅನುಷ್ಠಾನಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರದಿಂದ ಆಗದ ನಿರ್ಣಾಯಕ ತೀರ್ಮಾನದಿಂದ ಅಂತಿಮವಾಗಿ ಸಾರ್ವಜನಿಕರೇ ತೊಂದರೆಗೆ ಒಳಗಾಗಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ’ ಎನ್ನುತ್ತಾರೆ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ.

‘ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರ ಅವಧಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹1.3 ಕೋಟಿ ಅನುದಾನ ಬಿಡುಗಡೆಯಾಗಿತ್ತು ಎಂಬ ಮಾಹಿತಿ ಇದೆ. ಈಗಿರುವ ರೈತ ಸಂಪರ್ಕ ಕೇಂದ್ರದ ಪಕ್ಕದಲ್ಲೇ ಕಚೇರಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. 2022ರ ಸೆಪ್ಟೆಂಬರ್‌ನಲ್ಲಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಈಗ ಕಟ್ಟಡದ ಕಾಮಗಾರಿಯೂ ಪೂರ್ಣಗೊಂಡಿದೆ. ಉದ್ಘಾಟನೆ ಕಾಣದೆ ಬೀಗ ಜಡಿದುಕೊಂಡು ಅನಾಥವಾಗಿ ನಿಂತಿರುವುದನ್ನು ನೋಡಿದರೆ ಖೇದವೆನಿಸುತ್ತದೆ’ ಎಂದು ಅವರು ಬೇಸರಪಟ್ಟರು.

‘ಈ ಕಚೇರಿ ಕಾರ್ಯನಿರ್ವಹಿಸಬೇಕು ಎಂದರೆ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ತಾಂತ್ರಿಕ ಅಧಿಕಾರಿ, ಕಚೇರಿ ಅಧೀಕ್ಷಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಕೆಲವು ಹುದ್ದೆಗಳನ್ನು ಸರ್ಕಾರ ಸೃಜಿಸಬೇಕಿದೆ. ಕಟ್ಟಡ ನಿರ್ಮಾಣವಾಗಿದೆ ಎಂದು ಉದ್ಘಾಟಿಸಿದರೆ, ಮಾಡುವುದಾದರೂ ಏನು? ಹುದ್ದೆಗಳು ಸೃಷ್ಟಿಯಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.

ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಕಿತ್ತೂರಿನಲ್ಲಿ ನಿರ್ಮಾಣವಾದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಉದ್ಘಾಟಿಸುವಂತೆ ಕೃಷಿ ಸಚಿವರಿಗೆ ಸಮಯ ಕೇಳಲಾಗಿದೆ
ಬಾಬಾಸಾಹೇಬ ಪಾಟೀಲ ಶಾಸಕ ಕಿತ್ತೂರು ಮತಕ್ಷೇತ್ರ
ಈಗಷ್ಟೇ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಾಮಗಾರಿ ಮುಗಿದಿದೆ. ಶೀಘ್ರವೇ ಕಟ್ಟಡವನ್ನು ಉದ್ಘಾಟಿಸಲಾಗುವುದು
ಶಿವನಗೌಡ ಪಾಟೀಲ ಜಂಟಿನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.