ADVERTISEMENT

ಅಪಘಾತವಾದ ಕಾರು ನನ್ನದೇ, ಅದರಲ್ಲಿ ನಾನಿರಲಿಲ್ಲ: ಡಿಸಿಎಂ ಸವದಿ ಪುತ್ರ ಚಿದಾನಂದ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 10:31 IST
Last Updated 6 ಜುಲೈ 2021, 10:31 IST
ಚಿದಾನಂದ ಸವದಿ
ಚಿದಾನಂದ ಸವದಿ   

ಬೆಳಗಾವಿ: ಬಾಗಲಕೋಟೆ ಜಿಲ್ಲೆ ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿ ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಅಥಣಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಅಪಘಾತವಾಗಿರುವುದು ನನ್ನ ಕಾರೇ. ಆದರೆ ಅದರಲ್ಲಿ ನಾನಿರಲಿಲ್ಲ ಎಂದು ತಿಳಿಸಿದರು.

ಅಂಜನಾದ್ರಿಗೆ ಹೋಗಿ ವಾಪಸಾಗುವಾಗ ಘಟನೆ ನಡೆದಿದೆ. ನಾನು ಮುಂದಿದ್ದ ಸ್ನೇಹಿತರ ಕಾರಲ್ಲಿದ್ದೆ. ನನ್ನ ಕಾರ್‌ನಲ್ಲಿ ನನ್ನ ಚಾಲಕ ಹಾಗೂ ಮೂವರು ಸ್ನೇಹಿತರು ಇದ್ದರು. ದ್ವಿಚಕ್ರವಾಹನ ಸವಾರ ಏಕಾಏಕಿ ಅಡ್ಡ ಬಂದಿದ್ದರಿಂದ ಅಪಘಾತವಾಗಿದೆ ಎಂದು ಚಾಲಕ ತಿಳಿಸಿದ. ಆಗ ನಮ್ಮ ಕಾರು ಸುಮಾರು ಮೂವತ್ತು ಕಿ.ಮೀ. ದೂರದಲ್ಲಿತ್ತು ಎಂದು ಹೇಳಿದರು.

ADVERTISEMENT

ಚಾಲಕ ಮಾಹಿತಿ ಕೊಡುತ್ತಿದ್ದಂತೆಯೇ ನಾನೇ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ದೆ. ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿದ್ದೆ. ಬೇರೆ ಆಸ್ಪತ್ರೆಯಲ್ಲಿ ಆಮ್ಲಜನಕ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು. ರಾತ್ರಿ 8ಕ್ಕೆ ಕರೆ ಮಾಡಿದಾಗ ಸಾವಿಗೀಡಾದ ಸುದ್ದಿ ತಿಳಿಸಿದರು ಎಂದರು.

ನಾವು ಅಪಘಾತ ಸ್ಥಳಕ್ಕೆ ವಾಪಸಾಗುವ ವೇಳೆಗೆ ಅಲ್ಲಿ ಯಾರೂ ಇರಲಿಲ್ಲ. ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಹೋಗಲು ಒಂದು ತಾಸು ಬೇಕಾಯಿತು. ಬಾಗಲಕೋಟೆ ಎಸ್ಪಿ ಜೊತೆಗೂ ಮಾತನಾಡಿದ್ದೆ. ಕಾರಿನ‌ ನಂಬರ್ ಪ್ಲೇಟ್ ಬದಲಿಸಿದ ವಿಷಯ ನನಗೆ ಗೊತ್ತಿಲ್ಲ ಎಂದರು.

ಯಾರಿಗೂ ಧಮಕಿ ಹಾಕುವ ಪ್ರಶ್ನೆಯೇ ಇಲ್ಲ. ಜೀವ ಎಂದರೆ ಎಲ್ಲರಿಗೂ ಒಂದೆ. ಡಿಸಿಎಂ ಪುತ್ರ ಎಂಬ ಕಾರಣಕ್ಕೆ ಮಾನವೀಯತೆ ಬಿಡಲಾಗುವುದಿಲ್ಲ. ಯಾರೊಂದಿಗೂ ವಾಗ್ವಾದ ನಡೆಸಿಲ್ಲ. ಆರೋಪಿಸಿದವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಆಸ್ಪತ್ರೆ ಬಳಿ ಕುಟುಂಬದವರಾರೂ ನನಗೆ ಭೇಟಿಯಾಗಲಿಲ್ಲ.ಆ ಕುಟುಂಬದವರ ಮನೆಗೆ ಹೋಗಿ ಸಾಂತ್ವನ ಹೇಳುತ್ತೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.