ADVERTISEMENT

ಚಿಕ್ಕೋಡಿ: ಮಹಿಳೆ ಮೇಲೆ ಪಿಎಸ್‌ಐ ಅನಿತಾ ರಾಠೋಡರಿಂದ ಹಲ್ಲೆ– ಆರೋಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:45 IST
Last Updated 28 ಜುಲೈ 2024, 14:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ‘ವಿಚಾರಣೆ ನೆಪದಲ್ಲಿ ಪಿಎಸ್‌ಐ ಅನಿತಾ ರಾಠೋಡ ಅವರು ನನ್ನ ಹೊಟ್ಟೆಗೆ ಒದ್ದು ಗಾಯಗೊಳಿಸಿದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಎಸ್ಪಿ ಡಾ.ಭೀಮಾಶಂಕರ ಗುಳೇದ, ‘ಮಹಿಳೆಯ ಕೆನ್ನೆಗೆ ಹೊಡೆದಿದ್ದು ದೃಢಪಟ್ಟಿದೆ. ಹೊಟ್ಟೆಗೆ ಒದ್ದಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಗಿಲ್ಲ’ ಎಂದು‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಸಂತ್ರಸ್ತೆ, ತಾಲ್ಲೂಕಿನ ಖಡಕಲಾಟ ಗ್ರಾಮದ ಪೂನಂ ಮಾಯಣ್ಣವರ, ‘ನನ್ನನ್ನು ಜುಲೈ 27ರಂದು ಠಾಣೆಗೆ ಕರೆಯಿಸಿ, ಹಲ್ಲೆ ಮಾಡಿದ್ದಾರೆ. ನಿಪ್ಪಾಣಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಪಕ್ಕದ ಮನೆಯ ಗೋಡೆ ಹಾಗೂ ನೀರಿನ ವಿಚಾರವಾಗಿ ಸಹೋದರರೊಂದಿಗೆ ಜಗಳವಾಡಿ, ನ್ಯಾಯ ಕೇಳಲು ಜುಲೈ 26ರಂದು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ, ದೂರು ದಾಖಲಿಸಿಕೊಳ್ಳಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನನ್ನನ್ನು ಠಾಣೆಗೆ ಕರೆಯಿಸಿಕೊಂಡು, ಮಧ್ಯರಾತ್ರಿ 12ರವರೆಗೂ ಕೂರಿಸಿಕೊಂಡಿದ್ದರು. ಮಾರನೇ ದಿನ ಮತ್ತೆ ಠಾಣೆಗೆ ಕರೆಯಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಒದ್ದಿದ್ದಾರೆ. ಮೂರ್ಛೆ ಹೋಗಿದ್ದ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದೇನೆ’ ಎಂದು ದೂರಿದ್ದಾರೆ.

‘ಮಹಿಳೆ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಅನಿತಾ ರಾಠೋಡ ಅವರ ವಿಚಾರಣೆ ನಡೆಸಲಾಗುತ್ತಿದೆ. ನೊಂದ ಕುಟುಂಬಕ್ಕೆ ಪೊಲೀಸ್ ಇಲಾಖೆ ನ್ಯಾಯ ಕೊಡಿಸಲಿದೆ’ ಎಂದು ಭೀಮಾಶಂಕರ ಗುಳೇದ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.