ADVERTISEMENT

ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆ ಯಾವಾಗ?

ಚಿಕ್ಕೋಡಿ ಹೊರವಲಯದಲ್ಲಿ ₹3 ಕೋಟಿ ವೆಚ್ಚದಲ್ಲಿ ತಲೆ ಎತ್ತಿದ ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌

ಪ್ರಜಾವಾಣಿ ವಿಶೇಷ
Published 11 ಆಗಸ್ಟ್ 2024, 4:39 IST
Last Updated 11 ಆಗಸ್ಟ್ 2024, 4:39 IST
ಚಿಕ್ಕೋಡಿ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ
ಚಿಕ್ಕೋಡಿ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ   

ಚಿಕ್ಕೋಡಿ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ ಕಾಮಗಾರಿ ಮುಗಿದು ಒಂದು ವರ್ಷ ಕಳೆದಿದೆ. ಆದರೆ, ಅದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

1997ರಲ್ಲಿ ಚಿಕ್ಕೋಡಿಗೆ ಈ ವಸತಿ ನಿಲಯ ಮಂಜೂರಾಯಿತು. ಅಂದಿನಿಂದಲೂ ಪಟ್ಟಣದಲ್ಲಿ ಬೇರೆ ಬೇರೆ ಬಾಡಿಗೆ ಕಟ್ಟಡಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಅಲ್ಲಿ ದಾಖಲಾಗುವ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳಲು ಸರಿಯಾಗಿ ಬಸ್‌ ಸೌಕರ್ಯವೂ ಇಲ್ಲದೆ ಪರದಾಡುವಂತಾಗಿದೆ.

ಇದಕ್ಕೆ ಪರಿಹಾರ ಒದಗಿಸಲೆಂದು 2020-21ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ಪಟ್ಟಣದ ಹೊರವಲಯದಲ್ಲಿ ಅಗ್ನಿಶಾಮಕ ಕಚೇರಿಗೆ ಹೊಂದಿಕೊಂಡು ಕಟ್ಟಡ ನಿರ್ಮಿಸಿದೆ. ಒಂದು ಎಕರೆ ಪ್ರದೇಶದಲ್ಲಿ ₹3 ಕೋಟಿ ವೆಚ್ಚದಲ್ಲಿ ತಲೆ ಎತ್ತಿದ ಕಟ್ಟಡದ ಕಾಮಗಾರಿ 2023ರಲ್ಲೇ ಮುಗಿದಿದೆ.

ADVERTISEMENT

ಆದರೆ, ‘ಒಳಚರಂಡಿ, ಆವರಣ ಗೋಡೆ, ಶುದ್ಧ ಕುಡಿಯುವ ನೀರು ಮತ್ತಿತರ ವ್ಯವಸ್ಥೆ ಕಲ್ಪಿಸದೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ನಿರ್ವಹಣೆಗಾಗಿ ಇದನ್ನು ಹಸ್ತಾಂತರಿಸಲು ಮುಂದಾಗಿದೆ. ಹಾಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತನ್ನ ಅಧೀನಕ್ಕೆ ಪಡೆಯಲು ಮೀನಮೇಷ ಎಣಿಸುತ್ತಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕಾಮಗಾರಿ ಮುಗಿದು ಒಂದು ವರ್ಷವಾದರೂ ಬಳಕೆಯಾಗದ್ದರಿಂದ ನೂತನ ಕಟ್ಟಡ ಕಿಡಿಗೇಡಿಗಳಿಗೆ ಆಶ್ರಯ ತಾಣವಾಗುತ್ತಿದೆ. ಖಾಸಗಿ ಕಟ್ಟಡದಲ್ಲಿರುವ ವಸತಿ ನಿಲಯಕ್ಕೆ ಇಲಾಖೆಯು ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಿದ್ದು, ಸರ್ಕಾರಿ ಹಣ ವ್ಯರ್ಥವಾಗುತ್ತಿದೆ’ ಎನ್ನುವ ಆರೋಪ ಕೇಳಿಬರುತ್ತಿದೆ.

ರೋಹಿಣಿ ದೀಕ್ಷಿತ್‌
ವೀಣಾ ಮನಗೂಳಿ 
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಗ್ಗಜಗ್ಗಾಟದ ಮಧ್ಯೆ ನೂತನ ಕಟ್ಟಡ ಉದ್ಘಾಟನೆಯಾಗದೆ ಇರುವುದು ಸರಿಯಲ್ಲ. ಇದಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ತಕ್ಷಣವೇ ಉದ್ಘಾಟಿಸಬೇಕು
–ರೋಹಿಣಿ ದೀಕ್ಷಿತ್‌ ಸಾಮಾಜಿಕ ಕಾರ್ಯಕರ್ತೆ ಚಿಕ್ಕೋಡಿ

Q

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.