ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನಿಪ್ಪಾಣಿ ತಾಲ್ಲೂಕಿನ ಕಸನಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 50 ಜನ ಮಂಗಳವಾರ ತಡರಾತ್ರಿ ಅಸ್ವಸ್ಥಗೊಂಡಿದ್ದಾರೆ. ಪಾಂಡುರಂಗ ಬಚ್ಚಾರಾಮ ಪಾಟೀಲ (51) ಎಂಬುವರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದಕ್ಕೆ ವಾಂತಿಭೇದಿಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಗ್ರಾಮದಲ್ಲಿ ಮೂರು ದಿನಗಳಿಂದ ಸಣ್ಣಪುಟ್ಟ ವಾಂತಿಭೇದಿ ಪ್ರಕರಣಗಳು ವರದಿಯಾಗಿದ್ದವು. ಆದರೆ, ಮಂಗಳವಾರ ಏಕಾಏಕಿ 50ಕ್ಕೂ ಹೆಚ್ಚು ಜನ ಅಸ್ವಸ್ಥರಾದರು. ಪಾಂಡುರಂಗ ಬಚ್ಚಾರಾಮ ಅವರು ಸೋಮವಾರ (ನ.18) ಮೃತಪಟ್ಟಿದ್ದು, ತೀವ್ರ ಅಸ್ವಸ್ಥತೆ ಹಾಗೂ ಕಿಡ್ನಿ ಸಮಸ್ಯೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ವಾಂತಿ ಭೇದಿ ಹೆಚ್ಚಾದ ಬಳಿಕ ಪಾಂಡುರಂಗ ಅವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣಸಿತು ಎಂದು ಕುಟುಂಬದವರು ತಿಳಿಸಿದ್ದಾರೆ.
‘ಗ್ರಾಮಕ್ಕೆ ನೀರು ಪೂರೈಸುವ ಪೈಪ್‌ಲೈನ್ ಒಡೆದು, ಅದರಲ್ಲಿ ಚರಂಡಿ ನೀರು ಬೆರೆತಿದೆ. ಅದನ್ನು ಗ್ರಾಮಸ್ಥರು ಕುಡಿದ ಕಾರಣ ವಾಂತಿ, ಭೇದಿ ಮತ್ತು ಜ್ವರ ಕಾಣಿಸಿಕೊಂಡಿದೆ. ಅಸ್ವಸ್ಥರನ್ನು ಬೋರಗಾಂವ, ಮಾಣಕಾಪೂರ ಮತ್ತು ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ’ ಎಂದು ಚಿಕ್ಕೋಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಭಾಗಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.