ADVERTISEMENT

ಚಿಕ್ಕೋಡಿ: ಕೇಳಿಸದೇ ಕಲ್ಲು ಕಲ್ಲಿನಲಿನ ಕಲ್ಲುಕುಟಿಗರ ಧ್ವನಿ

ಮೂರು ತಲೆಮಾರುಗಳಿಂದ ಕಷ್ಟದಲ್ಲೇ ಬದುಕು; ನೆಲೆಯಿಲ್ಲದ, ನೆರಳಿಲ್ಲದ ಜನರಿಗೆ ಬೇಕಿದೆ ಆಸರೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 4:15 IST
Last Updated 6 ಜೂನ್ 2024, 4:15 IST
ಚಿಕ್ಕೋಡಿ ತಾಲ್ಲೂಕಿನ ಜೈನಾಪುರ ಬಳಿ ನಡೆದ ಬೀಸುವ ಕಲ್ಲು, ಒಳಕಲ್ಲು ಮಾರಾಟ – ಪ್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಜೈನಾಪುರ ಬಳಿ ನಡೆದ ಬೀಸುವ ಕಲ್ಲು, ಒಳಕಲ್ಲು ಮಾರಾಟ – ಪ್ರಜಾವಾಣಿ ಚಿತ್ರ   

ಚಿಕ್ಕೋಡಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಲ್ಲು ಕುಟಿಗರು ಈಗಲೂ ತಮ್ಮ ಕುಲಕಸುಬು ಮಾಡುತ್ತಿದ್ದಾರೆ. ತುತ್ತಿನಚೀಲ ತುಂಬಿಸಿಕೊಳ್ಳಲು ಕಲ್ಲು– ಬಂಡೆಗಳನ್ನೇ ಪುಡಿ ಮಾಡಿ ರೂಪ ನೀಡುತ್ತಿದ್ದಾರೆ.

‌ಮೂರು ತಲೆಮಾರುಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಅವರ ಬದುಕು ಮಾತ್ರ ಇನ್ನೂ ಮೂರ್ತರೂಪ ಪಡೆದಿಲ್ಲ. ಸಂಕಷ್ಟಗಳು ಕಲ್ಲು–ಬಂಡೆಗಳಂತೆಯೇ ದೃಢವಾಗಿ ಉಳಿದುಬಿಟ್ಟಿವೆ.

ಜೈನಾಪುರ ಕ್ರಾಸ್‌ಗೆ ಬಂದರೆ ಸಾಕು; ಒಳಕಲ್ಲು, ಬೀಸುವ ಕಲ್ಲು, ರುಬ್ಬುವ ಕಲ್ಲು, ಚಟ್ನಿ ಕಲ್ಲು, ನಂದಿ, ಲಿಂಗ, ನಾಗಪ್ಪ ಮುಂತಾದ ಮೂರ್ತಿಗಳು ಕಣ್ಣಿಗೆ ಬೀಳುತ್ತವೆ. ಕಲ್ಲು ಕುಟಿಗರು ಇವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿನ ಬಹುಪಾಲು ಜನ ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಅವರಿಗೆ ಬೇರೆ ಕೆಲಸಗಳೂ ಬರುವುದಿಲ್ಲ. ಹೀಗಾಗಿ, ಕಠಿಣವಾದರೂ ಕುಲಕಸುಬನ್ನೇ ನೆಚ್ಚಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.

ADVERTISEMENT

ಕಳೆದ 20 ವರ್ಷಗಳ ಹಿಂದೆ ಕಟೆದಿರುವ ಒಳಕಲ್ಲು, ರೊಟ್ಟಿ ಕಲ್ಲು, ರುಬ್ಬುವ ಕಲ್ಲು ಸೇರಿದಂತೆ ವಿವಿಧ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಇದೀಗ ಗ್ರೈಂಡರ್, ಮಿಕ್ಸರ್‌, ಗಿರಣಿಗಳು ಬಂದಿದ್ದರಿಂದ ಕಲ್ಲುಕುಟಿಕರು ತಯಾರಿಸಿರುವ ವಸ್ತುಗಳನ್ನು ಯಾರೂ ಕೇಳುವವರಿಲ್ಲ. ಹಳ್ಳಿಗಳಲ್ಲಿ ಮದುವೆ, ಕಾರ್ಯ, ಹಬ್ಬ, ಹರಿದಿನ, ಜಾತ್ರೆಗಳಲ್ಲಿ ಸಾಂಪ್ರದಾಯಿಕ ಆಚರಣೆಗಳಿಗೆ ಈ ವಸ್ತುಗಳು ಇನ್ನೂ ಬೇಕಾಗಿವೆ. ಇದೇ ಕಾರಣಕ್ಕೆ ಅಲ್ಲಲ್ಲಿ ಮಾರಾಟ ಸಾಧ್ಯವಾಗಿದೆ.

ಹಲವು ವರ್ಷಗಳಿಂದ ಜೈನಾಪುರ ಗ್ರಾಮದ ಬಳಿ ಸಂಕೇಶ್ವರ– ಜೇವರ್ಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಕಳೆಯುತ್ತಿದ್ದಾರೆ ಈ ಜನ. ಹುಕ್ಕೇರಿ ತಾಲ್ಲೂಕಿನ ಬೋರಗಲ್ಲ ಗ್ರಾಮದ ಗುಡ್ಡದಿಂದ ಕಲ್ಲು ತಂದು ಕಲ್ಲಿನ ವಸ್ತುಗಳನ್ನು ತಯಾರಿಸುತ್ತಾರೆ. ಇಲ್ಲಿಯೇ ಕುಳಿತು ವ್ಯಾಪಾರವನ್ನೂ ಮಾಡುತ್ತಾರೆ. ಇಡೀ ದಿನ ಕಲ್ಲು ಕಟಿದು ವಸ್ತುಗಳನ್ನು ತಯಾರಿಸಿ ವ್ಯಾಪಾರ ಮಾಡಿದರೆ ಖರ್ಚು ಕಳೆದು ತಿಂಗಳಿಗೆ ₹4,000 ದಿಂದ ₹5,000 ಸಾವಿರ ಆದಾಯ ಸಿಗುತ್ತದೆ. ಶ್ರಾವಣ ಮಾಸದಲ್ಲಿ ದೇವರ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದರೆ ತುಸು ಹೆಚ್ಚು ಹಣ ಸಿಗಬಹುದು.

ರುಬ್ಬುವ ಕಲ್ಲು ₹2,500, ಬೀಸುವ ಕಲ್ಲು ₹1,500, ಒಳಕಲ್ಲು ₹500, ಚಟ್ನಿಕಲ್ಲು ₹ 400ರಂತೆ ಅವುಗಳ ಗಾತ್ರದ ಮೇಲೆ ದರ ನಿಗದಿ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಕಲ್ಲಿನ ವ್ಯಾಪಾರ ನಡೆಯುತ್ತದೆ. ಮಳೆಗಾಲ, ಚಳಿಗಾಲ ಬಂದರೆ ಪಣಜಿ, ಮಡಗಾಂವ, ವಾಸ್ಕೊ ಸೇರಿದಂತೆ ಗೋವಾ ರಾಜ್ಯದ ಹಲವು ಕಡೆಗೆ ತಲೆ ಮೇಲೆ ಹೊತ್ತು ವ್ಯಾಪಾರ ಮಾಡಿಕೊಂಡು ಬರುವುದು ಅವರಿಗೆ ಅನಿವಾರ್ಯವಾಗಿದೆ.

ನಿರ್ಲಕ್ಷ್ಯಕ್ಕೆ ಒಳಗಾದ ಈ ಸಮುದಾಯದ ಜನರಿಗೆ ಇದೂವರೆಗೆ ಯಾರೂ ನೆಲೆ ಕಲ್ಪಿಸಿಲ್ಲ. ಹಲವರಿಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ಗಳೇ ಇಲ್ಲ. ಕಾಯಂ ವಿಳಾಸ ಎಂಬುದಿಲ್ಲ. ಆಡಳಿತ ವ್ಯವಸ್ಥೆ ಇವರ ಬದುಕು ಸುಧಾರಣೆಗೆ ಕಣ್ತೆರೆಯಬೇಕಿದೆ.

ಕಲ್ಲುಕುಟಿಗರು ಸಿದ್ಧಪಡಿಸಿದ ಆಕರ್ಷಕ ಬೀಸುವ ಕಲ್ಲುಗಳು

ಮೂರು ತಲೆ ಮಾರುಗಳಿಂದ ಕಲ್ಲು ಕಟೆದು ಮಾರಾಟ ಮಾಡುತ್ತಿದ್ದೇವೆ. ಇವುಗಳಿಗೆ ಬೇಡಿಕೆ ಇಲ್ಲ. ಆದರೆ ನಮಗೆ ಬೇರೆ ಕೆಲಸವೂ ಬರುವುದಿಲ್ಲ. ಇದೇ ಅನಿವಾರ್ಯವಾಗಿದೆ

-ಲಕ್ಷ್ಮಿ ಕಲ್ಲುಕುಟ್ಟರ, ಕಲ್ಲು ಕಟೆಯುವ ಮಹಿಳೆ

ಬಹುತೇಕರ ಮನೆಗಳಲ್ಲಿ ಆಧುನಿಕ ಅಡುಗೆ ಸಲಕರಣೆಗಳಿವೆ. ಮದುವೆ ಸಮಾರಂಭ ಗೃಹಪ್ರವೇಶ ಸಂದರ್ಭಗಳಲ್ಲಿ ಬೀಸುವ ಕಲ್ಲು ಖರೀದಿ ಮಾಡುತ್ತಿದ್ದು ಅದಷ್ಟೇ ಈ ಜನರಿಗೆ ಆಸರೆ

-ಸೇವಂತಾ ಚವ್ಹಾಣ, ಗ್ರಾಹಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.