ಚಿಕ್ಕೋಡಿ: ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ 77ನೇ ಜನ್ಮದಿನ ಅಂಗವಾಗಿ, ಅವರ ಅಭಿಮಾನಿ ಬಳಗದವರು ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ಮಾ.5ರಂದು ಮಧ್ಯಾಹ್ನ 3.30ಕ್ಕೆ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.
ಶನಿವಾರ ಸಂಜೆ ಮೈದಾನಕ್ಕೆ ಸ್ಪರ್ಧೆಯ ಸಮಿತಿಯವರು ತೆರಳಿ, ವ್ಯವಸ್ಥೆ ಪರಿಶೀಲಿಸಿದರು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹51 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ.
ಈ ಸ್ಪರ್ಧೆ ವೀಕ್ಷಣೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ 4 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ. ಅವರ ವಾಹನಗಳ ನಿಲುಗಡೆಗೆ 8 ಕಡೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ 8 ಆಂಬುಲೆನ್ಸ್, 4 ಪಶು ಆಂಬುಲೆನ್ಸ್ ಮತ್ತು 2 ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. 20 ಸಾವಿರಕ್ಕೂ ಅಧಿಕ ಜನ ಒಂದೆಡೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗಿದೆ. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎತ್ತುಗಳ ಚಲನ–ವಲನದ ಮೇಲೆ ನಿಗಾ ಇರಿಸಲು 8 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ.
‘ಸ್ಪರ್ಧೆ ವೀಕ್ಷಿಸಲು ಬರುವವರಿಗೆ 30 ಕಡೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ 10 ಕಡೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬಡಿಗೆ, ಬಾರಕೋಲು, ಬ್ಯಾಟರಿಯಿಂದ ಎತ್ತುಗಳಿಗೆ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ’ ಎಂದು ಸಮಿತಿ ಮುಖಂಡರಾದ ಬಾಳಾಸಾಹೇಬ ಪಾಟೀಲ, ಸುನೀಲ ಸಪ್ತಸಾಗರ ‘ಪ್ರಜಾವಾಣಿ’ಗೆ ತಿಳಿಸಿದರು. ಉಮೇಶ ಸಾತ್ವಾರ, ಕಿರಣ ಮಾಳಿ, ಅರುಣ ಮಗದುಮ್ಮ, ರವಿ ಮಾಳಿ, ವಿನೋದ ಚಿತಳೆ, ರವಿ ಮಿರ್ಜಿ, ರವಿ ಕೋತಳಿ, ರವಿ ಮಾನೆ, ಅಂಕುಶ ಕೋತಳಿ, ಪಂಕಜ ಪವಾರ, ಮಲ್ಲು ಹವಾಲ್ದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.