ADVERTISEMENT

ಚಿಕ್ಕೋಡಿ: ಬೆಂಬಿಡದ ಬಿಡಾಡಿ ದನಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 6:27 IST
Last Updated 14 ನವೆಂಬರ್ 2024, 6:27 IST
<div class="paragraphs"><p>ಚಿಕ್ಕೋಡಿ ಪಟ್ಟಣದ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಮಲಗಿದ ಬಿಡಾಡಿ ದನಗಳು</p></div>

ಚಿಕ್ಕೋಡಿ ಪಟ್ಟಣದ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಮಲಗಿದ ಬಿಡಾಡಿ ದನಗಳು

   

- ಪ್ರಜಾವಾಣಿ ಚಿತ್ರ

ಚಿಕ್ಕೋಡಿ: ಪಟ್ಟಣದ ಬಹುತೇಕ ರಸ್ತೆ, ಗಲ್ಲಿ, ಹೆದ್ದಾರಿ, ಮಾರುಕಟ್ಟೆಗಳಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಸಂಕೇಶ್ವರ– ಜೇವರ್ಗಿ, ನಿಪ್ಪಾಣಿ– ಮುಧೋಳ ಎರಡು ರಾಜ್ಯ ಹೆದ್ದಾರಿಗಳು ಪಟ್ಟಣದಲ್ಲಿ ಹಾದು ಹೋಗುವುದರಿಂದ ವಾಹನ ದಟ್ಟನೆ ಹೆಚ್ಚಾಗಿದೆ. ನಿತ್ಯ ಓಡಾಡುವ ವಾಹನ ಸವಾರರು ಬಿಡಾಡಿ ದನಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಶೈಕ್ಷಣಿಕ ಜಿಲ್ಲಾ ಕೇಂದ್ರವೂ, ಉಪ ವಿಭಾಗ ಕೇಂದ್ರವನ್ನು ಹೊಂದಿರುವ ಚಿಕ್ಕೋಡಿ ಪಟ್ಟಣಕ್ಕೆ ಪ್ರತಿದಿನ ಸಹಸ್ರಾರು ಜನರು ತಮ್ಮ ಕೆಲಸಕ್ಕೆ ಆಗಮಿಸುತ್ತಾರೆ. ಹಗಲಿರುಳು 50– 60 ಬಿಡಾಡಿ ದನಗಳು ರಸ್ತೆ ಮೇಲೆಯೇ ಠಿಕಾಣಿ ಹೂಡುವುದರಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿ, ಬೈಕ್ ಸವಾರರು ಗಾಯಗೊಂಡ ಉದಾಹರಣೆಗಳು ಇವೆ. ಈ ಕುರಿತು ಎಚ್ಚರಿಕೆ ವಹಿಸಬೇಕಿದ್ದ ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ.

ಕೇಂದ್ರ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಮುಂಬಾಗ, ಬಸವೇಶ್ವರ ವೃತ್ತ, ಇಂದಿರಾನಗರ ಕ್ರಾಸ್, ಗಾಂಧಿ ಮಾರುಕಟ್ಟೆ, ಕೆ.ಸಿ. ಮಾರುಕಟ್ಟೆ, ಗಣಪತಿ ಪೇಟೆ ಮುಂತಾದ ಕಡೆಗೆ ನೂರಾರು ದನಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ದನಗಳ ಹಾವಳಿಯಿಂದ ಬೀದಿ ಬದಿಯ ವ್ಯಾಪಾರಿಗಳು ಹೈರಾಣಾಗಿದ್ದಾರೆ. ಮಾರಾಟಕ್ಕಿಟ್ಟ ಹಣ್ಣು ತರಕಾರಿಗಳನ್ನು ತಿನ್ನಲು ಬಾಯಿ ಹಾಕುವುದರಿಂದ ದನಗಳನ್ನು ಓಡಿಸಿ ಕಳುಹಿಸುವುದು ವ್ಯಾಪಾರಸ್ಥರಿಗೆ ತಲೆನೋವಾಗಿದೆ.

‘ಪುರಸಭೆಯ ಈ ಹಿಂದಿಯ ಮುಖ್ಯಾಧಿಕಾರಿ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸುತ್ತಿದ್ದರು. ದನಗಳ ಮಾಲೀಕರಿಗೆ ನೋಟಿಸ್ ನೀಡಿ ಒಂದಿಷ್ಟು ನಿಯಂತ್ರಣ ಮಾಡಿದ್ದರು. ಈಗಿನವರು ಸಮಸ್ಯೆ ಆಲಿಸುತ್ತಿಲ್ಲ’ ಎಂದು ಜನ ದೂರುತ್ತಿದ್ದಾರೆ.

ಇದೀಗ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಪ್ರಾರಂಭಿಸಿದ್ದರಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್ ಓಡಾಡುವುದರಿಂದ ದನಗಳು ಅವುಗಳಿಗೆ ಬಾಯಿ ಹಾಕುತ್ತವೆ. ಇದು ದನಗಳಿಗೂ ಅಪಾಯ. ಇವುಗಳ ಹಿಂದೆ ಮುಂದಗೆ ಓಡಾಡುವ ವಾಹನ ಸವಾರರಿಗೂ ತೊಂದರೆ ಆಗುತ್ತಿದೆ.

ದನಗಳು ಅಂಗಡಿ ಮುಂಗಟ್ಟುಗಳ ಎದುರಿನಲ್ಲಿ ಇಟ್ಟಿರುವ ಕಸದ ಬ್ಯಾರಲ್‌ಗಳಲ್ಲಿ ಮುಖ ಹಾಕಿ ಕಸವನ್ನು ಮತ್ತೆ ರಸ್ತೆಗೆ ಚೆಲ್ಲುತ್ತವೆ. ಪೌರ ಕಾರ್ಮಿಕರು ಸ್ವಚ್ಛಗೊಳಿಸಿದ ರಸ್ತೆ ಮೇಲೆ ಮತ್ತೆ ಕಸ ಬೀಳುತ್ತಿದೆ. ರಸ್ತೆಗಳ ಮೇಲೆ ದನಗಳನ್ನು ಬಿಡುವ ಮಾಲೀಕರನ್ನು ಪುರಸಭೆ ಗುರುತಿಸಿ ಎಚ್ಚರಿಕೆ ನೀಡಬೇಕಿದೆ. ಸ್ಪಂದಿಸದೇ ಇದ್ದರೆ ಕೊಂಡವಾಡಿಗೆ ಅಥವಾ ಗೋಶಾಲೆಗಳಿಗೆ ಕಳುಹಿಸುವಂತೆ ಎಚ್ಚರಿಕೆ ನೀಡಿದ್ದಲ್ಲಿ ಮಾತ್ರ ಬಿಡಾಡಿ ದನಗಳ ಹಾವಳಿಗೆ ತಡೆ ಬೀಳಲಿದೆ ಎಂಬುದು ನಾಗರಿಕರ ತಕರಾರು.

ಚಿಕ್ಕೋಡಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯಲ್ಲಿ ಕಸ ತುಂಬಿದ ಬ್ಯಾರಲ್‌ಗೆ ಬಾಯಿ ಹಾಕಿದ ಬಿಡಾಡಿ ದನ
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಲಗಿಕೊಂಡು ವಿಶ್ರಮಿಸುತ್ತಿರುವ ಬಿಡಾಡಿ ದನಗಳು.
ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಪುರಸಭೆ ಅಧಿಕಾರಿಗಳು ಗಮನ ಹರಿಸಿ ನಿಯಂತ್ರಣ ಮಾಡಬೇಕು
– ಟಿ.ಎಸ್. ಮೋರೆ ಅಧ್ಯಕ್ಷ ಜಿಲ್ಲಾ ಕೃಷಿಕ ಸಮಾಜ ಬೆಳಗಾವಿ
ಬಿಡಾಡಿ ದನಗಳನ್ನು ಹಿಡಿದುಕೊಂಡು ಘನತ್ಯಾಜ್ಯ ವಿಲೇವಾರಿ ಘಟಕದ ಬಳಿ ಮೇಯಲು ಬಿಡಲು ಕ್ರಮ ಕೈಗೊಳ್ಳಲಾಗುವುದು
ವೆಂಕಟೇಶ ನಾಗನೂರ ಮುಖ್ಯಾಧಿಕಾರಿ ಪುರಸಭೆ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.