ADVERTISEMENT

ಕಾಂ‌ಗ್ರೆಸ್‌ನಿಂದ ಅಲ್ಪಸಂಖ್ಯಾತರ ತುಷ್ಟೀಕರಣ

ದೇವಸ್ಥಾನ ಪರಿಷತ್ ಸಮಾವೇಶ: ಸರ್ಕಾರದ ವಿರುದ್ಧ ಪ್ರಭಾಕರ ಕೋರೆ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 6:34 IST
Last Updated 7 ಮಾರ್ಚ್ 2024, 6:34 IST
ಚಿಕ್ಕೋಡಿ ತಾಲ್ಲೂಕಿನ ಅಂಕಲಿಯ ಶಿವಾಲಯದಲ್ಲಿ ಬುಧವಾರ ನಡೆದ ದೇವಸ್ಥಾನ ಪರಿಷತ್ ಕಾರ್ಯಕ್ರಮವನ್ನು ಪ್ರಭಾಕರ ಕೋರೆ ಉದ್ಘಾಟಿಸಿದರು
ಚಿಕ್ಕೋಡಿ ತಾಲ್ಲೂಕಿನ ಅಂಕಲಿಯ ಶಿವಾಲಯದಲ್ಲಿ ಬುಧವಾರ ನಡೆದ ದೇವಸ್ಥಾನ ಪರಿಷತ್ ಕಾರ್ಯಕ್ರಮವನ್ನು ಪ್ರಭಾಕರ ಕೋರೆ ಉದ್ಘಾಟಿಸಿದರು   

ಚಿಕ್ಕೋಡಿ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ವಿರೋಧಿ ಧೋರಣೆ ತಳೆದು,  ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ’ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ದೂರಿದರು.

ತಾಲ್ಲೂಕಿನ ಅಂಕಲಿಯ ಶಿವಾಲಯದಲ್ಲಿ ಹಿಂದೂ ಜನಜಾಗೃತಿ ವೇದಿಕೆ, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಹಯೋಗದಲ್ಲಿ ಬುಧವಾರ ನಡೆದ ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ತಾಲ್ಲೂಕುಗಳ ದೇವಸ್ಥಾನ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕೊಡದ ಕಾಂಗ್ರೆಸ್ ಸರ್ಕಾರವು ದೇವಾಲಯದ ಹುಂಡಿ ಹಣವನ್ನು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಹಿಂದೂಗಳನ್ನು ತುಳಿಯುವ ಕೆಲಸ ಮಾಡುತ್ತಿದೆ. ಹೀಗಾಗಿ ಹಿಂದೂಗಳು ಜಾಗೃತರಾಗಿ ಹೋರಾಟ ಮಾಡಿ, ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕರೆ ನೀಡಿದರು.

ADVERTISEMENT

ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ‘ದೇವಾಲಯಗಳು ಸರ್ಕಾರದ ಆಡಳಿತದಿಂದ ಮುಕ್ತವಾಗಬೇಕಿದೆ. ಇನ್ನುಳಿದ ಧರ್ಮಕ್ಕೊಂದು ನ್ಯಾಯ, ಹಿಂದೂ ಧರ್ಮಕ್ಕೊಂದು ನ್ಯಾಯ ಎಂಬ ಧೋರಣೆಯನ್ನು ಸರ್ಕಾರ ಕೈಬಿಡಬೇಕಿದೆ. ದೇವಾಲಯಗಳಲ್ಲಿ ಧರ್ಮ ಶಿಕ್ಷಣ ದೊರೆಯಬೇಕಿದೆ. ವಿಶ್ವಸ್ಥರ ಸಮಾವೇಶವನ್ನು ಮಾಡಿದರಷ್ಟೇ ಸಾಲದು. ಹಿಂದೂಗಳು ಒಂದಾಗಿ ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.

ಬಾವನ ಸೌಂದತ್ತಿಯ ಓಂಕಾರ ಮಠದ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಂಜರಿಯ ವಿಠ್ಠಲ ರುಕ್ಮಿಣಿ ದೇವಸ್ಥಾನದ ಟ್ರಸ್ಟಿ ಬಾಬಾಸಾಹೇಬ ಬಿಸಲೆ ಮಹಾರಾಜರು, ಸಿಬಿಕೆಎಸ್‍ಎಸ್ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕ ಭರತೇಶ ಬನವಣೆ, ಅಜಿತರಾವ್‌ ದೇಸಾಯಿ, ಮಹಾವೀರ ಕಾತ್ರಾಳೆ, ಚೇತನ ಪಾಟೀಲ, ಸಂದೀಪ ಪಾಟೀಲ, ಮಲ್ಲಪ್ಪ ಮೈಶಾಳೆ, ಸುರೇಶ ಪಾಟೀಲ, ತುಕಾರಾಮ ಪಾಟೀಲ, ವಿವೇಕ ಕಮತೆ, ಎಂ.ಎನ್.ಮಜುಕರ, ಗುರುಪ್ರಸಾದ ಪಾಟೀಲ ಇದ್ದರು.

ದೇವಸ್ಥಾನಗಳ ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. 300ಕ್ಕೂ ಹೆಚ್ಚು ವಿಶ್ವಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.