ADVERTISEMENT

ಹೆರಿಗೆ ಸಮಯದಲ್ಲಿ ಮಗು ಸಾವು: ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 10:00 IST
Last Updated 20 ಜುಲೈ 2022, 10:00 IST
ಹೆರಿಗೆ ಸಮಯದಲ್ಲಿ ಮಗು ಸಾವು: ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ 
ಹೆರಿಗೆ ಸಮಯದಲ್ಲಿ ಮಗು ಸಾವು: ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ    

ಬೆಳಗಾವಿ: ‘ಹೆರಿಗೆ ವೇಳೆ ಮಗು ಮೃತಪಟ್ಟಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ' ಎಂದು ಆರೋಪಿಸಿ ತಾಲ್ಲೂಕಿನ ಹೊನ್ನಿಹಾಳದ ಸುನೀತಾ ಉಚಗಾಂವಕರ ಅವರ ಕುಟುಂಬದವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಬುಧವಾರ ಪ್ರತಿಭಟಿಸಿದರು.

‘ವಾರದ ಹಿಂದೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಮಂಗಳವಾರದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕೂಡಲೇ ಶಸ್ತ್ರಚಿಕಿತ್ಸೆ ಮಾಡುವಂತೆ ಕೋರಿದರೂ ವೈದ್ಯರು ಸ್ಪಂದಿಸಲಿಲ್ಲ. ಹಾಗಾಗಿ ಬುಧವಾರ ಹೆರಿಗೆ ಸಮಯದಲ್ಲಿ ಮಗು ಸಾವನ್ನಪ್ಪಿದೆ’ ಎಂದು ಆಪಾದಿಸಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಆಸ್ಪತ್ರೆ ಅಧಿಕಾರಿಗಳು ಕುಟುಂಬಸ್ಥರ ಮನವೊಲಿಸಿದರು. ‘ವೈದ್ಯರು ತಪ್ಪೆಸಗಿದ್ದು ಸಾಬೀತಾದರೆ ಕ್ರಮ ಜರುಗಿಸಲಾಗುವುದು‘ ಎಂದು ಭರವಸೆ ನೀಡಿದ್ದರಿಂದ ಪಾಲಕರು ಪ್ರತಿಭಟನೆ ಹಿಂದಕ್ಕೆ ಪಡೆದರು.

ADVERTISEMENT

ಈ ಬಗ್ಗೆ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎ.ಬಿ.ಪಾಟೀಲ, ‘ಜುಲೈ 14ರಂದು ಆಸ್ಪತ್ರೆಗೆ ದಾಖಲಾದ ಗರ್ಭಿಣಿಗೆ ವೈದ್ಯರು ಸರಿಯಾಗಿಯೇ ಚಿಕಿತ್ಸೆ ನೀಡಿದ್ದಾರೆ. ಆದರೆ, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರು ದೂರಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಆಧರಿಸಿ ತನಿಖೆ ಕೈಗೊಳ್ಳಲಾಗುವುದು. ವೈದ್ಯರು ತಪ್ಪೆಸಗಿದ್ದರೆ ಕ್ರಮ ಜರುಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.