ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲೇ 10 ಬಾಲ್ಯ ವಿವಾಹ!

ಚುನಾವಣೆ ದಿನಗಳನ್ನು ‘ಬಳಕೆ’ ಮಾಡಿಕೊಂಡ ಪೋಷಕರು

​ಪ್ರಜಾವಾಣಿ ವಾರ್ತೆ
Published 15 ಮೇ 2024, 4:33 IST
Last Updated 15 ಮೇ 2024, 4:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಳಗಾವಿ: ಸರ್ಕಾರದ ಕಠಿಣ ಕ್ರಮದ ಎಚ್ಚರಿಕೆ ಮತ್ತು ಜಾಗೃತಿ ಮಧ್ಯೆಯೂ ಬೆಳಗಾವಿ ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲೇ 10 ಬಾಲ್ಯವಿವಾಹ ನಡೆದಿವೆ. ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಗ್ರಾಮಗಳಲ್ಲಿ ಸಾಮೂಹಿಕ ವಿವಾಹ ಸಮಾರಂಭಗಳು ನಡೆಯುತ್ತಿದ್ದು, ಅಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಹೆಚ್ಚಿವೆ ಎಂದು ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

2022–23ನೇ ಸಾಲಿನಲ್ಲಿ 16 ಮತ್ತು 2023–24ರಲ್ಲಿ 23 ಬಾಲ್ಯವಿವಾಹ ನೆರವೇರಿದ್ದವು. ಆದರೆ, ಈ ಸಲ ಒಂದೂವರೆ ತಿಂಗಳಲ್ಲೇ (2024ರ ಏಪ್ರಿಲ್‌ 1ರಿಂದ ಮೇ 13ರವರೆಗೆ) 10 ಬಾಲ್ಯವಿವಾಹ ನಡೆದಿವೆ.

ADVERTISEMENT

‘ಏಪ್ರಿಲ್‌ನಲ್ಲಿ ಇಡೀ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಕಾವು ಏರಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ಅವಕಾಶ ಬಳಸಿಕೊಂಡ ಕೆಲವರು ಬಾಲ್ಯವಿವಾಹ ಮಾಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

2023–24ರಲ್ಲಿ ಮಕ್ಕಳ ಸಹಾಯವಾಣಿ 1098ರ ಕೇಂದ್ರಕ್ಕೆ 133 ಕರೆ ಬಂದಿದ್ದವು. ಈ ಪೈಕಿ 110 ಬಾಲ್ಯವಿವಾಹ ತಡೆಯಲಾಗಿತ್ತು. 2024ರ ಏಪ್ರಿಲ್ 1ರಿಂದ ಮೇ 13ರ ಅವಧಿಯಲ್ಲಿ 25 ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲಾಗಿದೆ.

ಗುರಿ ಮುಟ್ಟಲು ಮದುವೆ: ‘21 ವರ್ಷ ವಯಸ್ಸಿನ ವರ ಮತ್ತು 18 ವರ್ಷ ಪೂರ್ಣಗೊಂಡ ವಧುವಿನ ಜನ್ಮದಾಖಲೆ ಪರಿಶೀಲಿಸಿಯೇ ಮದುವೆ ಮಾಡಿಸುವಂತೆ ಸಾಮೂಹಿಕ ವಿವಾಹ ಸಮಾರಂಭದ ಆಯೋಜಕರಿಗೂ ಸೂಚಿಸಿದ್ದೇವೆ. ಆದರೆ, ಕೆಲ ಆಯೋಜಕರು ಈ ವರ್ಷ ಇಂತಿಷ್ಟು ಮದುವೆ ಮಾಡಿಸುವ ಗುರಿ ಹೊಂದಿರುತ್ತಾರೆ. ಅಷ್ಟೊಂದು ಜೋಡಿ ಸಿಗದಾದಾಗ ಗುರಿ ಮುಟ್ಟಲು ಬಾಲ್ಯವಿವಾಹಕ್ಕೆ ಮುಂದಾಗುತ್ತಾರೆ’ ಎಂದು ಮಕ್ಕಳ ರಕ್ಷಣಾಧಿಕಾರಿ ಜೆ.ಟಿ.ಲೋಕೇಶ ತಿಳಿಸಿದರು.

‘ಬಾಲ್ಯವಿವಾಹ ತಡೆಗೆ ಜಾಗೃತಿ ಹೆಚ್ಚಿದ್ದರಿಂದ ಈಗ ಕೆಲವರು ಗೋಧೂಳಿ ಮದುವೆ (ಮಧ್ಯರಾತ್ರಿ ನಡೆಯುವ ಮದುವೆ), ಯಾದಿ ಮೇ ಶಾದಿ ಮಾಡುತ್ತಿದ್ದಾರೆ. ಮನೆ ಪೂಜೆ ಹೆಸರಲ್ಲೇ ಅಪ್ರಾಪ್ತರ ಮದುವೆ ಮಾಡಿಸುತ್ತಾರೆ. ಇದರಿಂದ ಕಾರ್ಯಾಚರಣೆಗೆ ಕಷ್ಟವಾಗುತ್ತಿದೆ. ಆದರೂ, ಪ್ರಯತ್ನ ಮುಂದುವರಿಸಿದ್ದೇವೆ’ ಎಂದರು.

‘ಬಾಲ್ಯವಿವಾಹ ಆಗಲಿರುವ ಕೆಲ ಬಾಲಕಿಯರು ಅಥವಾ ಆಕೆಯ ಸ್ನೇಹಿತೆಯರು ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ನಾವು ತಕ್ಷಣವೇ ಬಾಲಕಿ ಮನೆಗೆ ತೆರಳಿ ರಕ್ಷಿಸಿ, ಇಲಾಖೆ ಹಾಸ್ಟೆಲ್‌ಗಳಲ್ಲಿ ಆಶ್ರಯ ಕಲ್ಪಿಸುತ್ತೇವೆ. ಪಾಲಕರು ನಿಶ್ಚಯಿಸಿದ ಮದುವೆ ದಿನಾಂಕ ಮುಗಿದ ಬಳಿಕ ಬಾಲಕಿಯನ್ನು ಮನೆಗೆ ಕಳುಹಿಸುತ್ತೇವೆ. ಒಂದು ವೇಳೆ ನಿರಾಕರಿಸಿದರೆ, 18 ವರ್ಷ ತುಂಬುವವರೆಗೆ ಹಾಸ್ಟೆಲ್‌ನಲ್ಲೇ ಇರಿಸುತ್ತೇವೆ. ನಿಯಮ ಮೀರಿ ಬಾಲ್ಯವಿವಾಹ ಮಾಡಿದರೆ, ವರ–ವಧುವಿನ ಪಾಲಕರ ವಿರುದ್ಧ ದೂರು ದಾಖಲಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.