ಚಿಕ್ಕೋಡಿ: ಪಟ್ಟಣದ ವಿವಿಧೆಡೆ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗುವುದು ಕಂಡುಬರುತ್ತಿದೆ. ಶಾಲೆಗಳು ಪುನರರಾರಂಭವಾಗಿದ್ದರೂ ಅವರು ಕಲಿಕೆಯಿಂದ ದೂರ ಉಳಿದಿದ್ದಾರೆ.
ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಸಾಮಾಜಿಕ ಪಿಡುಗು ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಬಸವ ವೃತ್ತ, ಕೋರ್ಟ್ ಸಂಕೀರ್ಣದ ಎದುರು, ಕೇಂದ್ರ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಬಳಿ ಮಕ್ಕಳು ಗುಂಪು ಗುಂಪಾಗಿ ಬೇಡುವುದು ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ಹದಿಹರೆಯದವರೆಗಿನವರು ಭಿಕ್ಷೆ ಬೇಡುತ್ತಿದ್ದಾರೆ. ಓದು–ಬರಹ ಕಲಿಯಬೇಕಾದ ಕೈಗಳಲ್ಲಿ ಪ್ಲೇಟ್ ಹಿಡಿದು, ಅದರಲ್ಲಿ ಯಾವುದಾದರೊಂದು ದೇವರ ಮೂರ್ತಿ ಇಟ್ಟುಕೊಂಡು ಹಣಕ್ಕಾಗಿ ದುಂಬಾಲು ಬೀಳುವುದು ಕಂಡು ಬರುತ್ತಿದೆ.
ಕೆಲವೊಮ್ಮೆ ಸಾರ್ವಜನಿಕರು ಹಣ ನೀಡದಿದ್ದರೆ ಮಕ್ಕಳು ಅವರನ್ನು ಹೀಯಾಳಿಸುವುದೂ ಉಂಟು. ಶಾಲೆ-ಕಾಲೇಜು ವಿದ್ಯಾರ್ಥಿನಿಯರೂ ಅವರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಮಹಿಳೆಯರು ಕಂಕುಳಲ್ಲಿ ಹಸುಗೂಸುವಿನ ಜೊತೆ ಸಂಚರಿಸಿ ಭಿಕ್ಷೆ ಬೇಡುವುದು ಕಂಡು ಬರುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
‘ಪಟ್ಟಣದಲ್ಲಿ ಭಿಕ್ಷಾಟನೆ ಮಾಡುವ ಬಹುತೇಕ ಮಕ್ಕಳು ಇಲ್ಲಿನ ರಾಮನಗರ ಪ್ರದೇಶದವರೇ ಆಗಿದ್ದಾರೆ. ಅಲ್ಲಿರುವ ಅಲೆಮಾರಿ ಜನಾಂಗದ ಕುಟುಂಬದವರು ಜೀವನ ನಿರ್ವಹಣೆಗೆ ನಿತ್ಯವೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ವ್ಯಾಪಾರ–ವಹಿವಾಟು ನಡೆಸುತ್ತಾರೆ. ಶಾಲೆಯಲ್ಲಿ ಮಕ್ಕಳ ದಾಖಲಾತಿಯಾಗಿದೆ. ಅವರನ್ನು ಶಾಲೆಗೆ ಕರೆತರಲು ಸಂಬಂಧಿಸಿದವರು ಆಸಕ್ತಿ ವಹಿಸಬೇಕು’ ಎನ್ನುತ್ತಾರೆ ವಕೀಲೆ ಮಂಜುಷಾ ಅಡಕೆ.
‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ವಹಿಸಲಾಗುತ್ತಿದೆ. ಕೆಲವೊಮ್ಮೆ ದಾಳಿ ವೇಳೆ ಮಕ್ಕಳು ತಪ್ಪಿಸಿಕೊಳ್ಳುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ದಿಢೀರ್ ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸಲಿದ್ದೇವೆ’ ಎಂದು ಸಿಡಿಪಿಒ ದೀಪಾ ಕಾಳೆ ಪ್ರತಿಕ್ರಿಯಿಸಿದರು.
*
ಭಿಕ್ಷಾಟನೆ ಸಾಮಾಜಿಕ ಪಿಡುಗು. ಅದಕ್ಕೆ ಯಾರೂ ಪ್ರೋತ್ಸಾಹ ನೀಡಬಾರದು. ಪಾಲಕರಲ್ಲಿ ಅರಿವು ಮೂಡಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಆಗಬೇಕು.
-ಭೀಮಾರತಿ ಭಂಡಾರಕರ, ವಕೀಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.