ಮೂಡಲಗಿ: ಮೂಡಲಗಿಯ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮವು ಹಬ್ಬದ ಕಳೆ ಕಟ್ಟಿತ್ತು.
ತಾಲ್ಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಮಂಗಳ ವಾದ್ಯ ವೃಂದ, ಕುಂಭ ಮೇಳ, ಆರತಿಯೊಂದಿಗೆ ಬೆಳ್ಳಿ ರಥದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿಕೊಂಡು ಶಾಲೆಗೆ ಬರಮಾಡಿಕೊಳ್ಳುವುದರ ಮೂಲಕ ಗಮನಸೆಳೆದರು.
ಶಾಲೆಯ ಮುಂದೆ ರಂಗೋಲಿಯ ಚಿತ್ತಾರಗಳನ್ನು ಬಿಡಿಸಿದ್ದರು. ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ನೀಡಲಾಯಿತು.
ವಲಯ ವ್ಯಾಪ್ತಿಯಲ್ಲಿ 235 ಪ್ರಾಥಮಿಕ, 34 ಪ್ರೌಢ ಶಾಲೆ, 8 ಮೊರಾರ್ಜಿ ವಸತಿ ಶಾಲೆಗಳಲ್ಲಿ ಸ್ವಚ್ಛಗೊಳಿಸಿ ಕಬ್ಬು, ಮಾವಿನ ಎಲೆಗಳಿಂದ ಶೃಂಗಾರಗೊಳಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಕೆಲವು ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿ, ‘ಎಲ್ಲ ಶಾಲೆಗಳಲ್ಲಿ ಪ್ರವೇಶ ಆರಂಭೋತ್ಸವವು ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವು ಹರ್ಷದಾಯಿಕವಾಗಿತ್ತು. 2022–23 ಕಲಿಕಾ ಚೇತರಿಕೆ ವರ್ಷವಾಗಿದೆ. ಈ ಮೂಲಕ ಮಳೆಬಿಲ್ಲು ಕಾರ್ಯಕ್ರಮದ ಮೂಲಕ 14 ದಿನಗಳವರೆಗೆ ಆಟದ ಹಬ್ಬವಿರುವುದು. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವ ವಿವಿಧ ಕಾರ್ಯಚಟುವಟಿಕೆಗಳು ಇರುವವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.