ADVERTISEMENT

ಕುಖ್ಯಾತ ರೌಡಿ ವಿಶಾಲ್‌ ಸಿಂಗ್‌ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 6:35 IST
Last Updated 11 ಜೂನ್ 2024, 6:35 IST
ವಿಶಾಲ ಸಿಂಗ್‌
ವಿಶಾಲ ಸಿಂಗ್‌   

ಪ್ರಜಾವಾಣಿ ವಾರ್ತೆ

ಬೆಳಗಾವಿ: ಕೊಲೆ, ಕೊಲೆ ಯತ್ನ, ಹಣಕ್ಕಾಗಿ ಅಪಹರಣ ಮತ್ತು ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಯನ್ನು ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ, ಕಲಬುರಗಿ ಜೈಲಿನಲ್ಲಿ ಇರಿಸಿದ್ದಾರೆ. ಕರ್ನಾಟಕದ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಗೂಂಡಾ ಕಾಯ್ದೆಯಡಿ ಬಂಧನ ದೃಢಪಡಿಸಿದ ಮೊದಲ ಪ್ರಕರಣ ಇದಾಗಿದೆ.

ಇಲ್ಲಿನ ಶಾಸ್ತ್ರಿ ನಗರದ ನಿವಾಸಿ, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಚಿಕ್ಕನಂದಿಹಳ್ಳಿ ಮೂಲದ ವಿಶಾಲ್ ಸಿಂಗ್ ಚೌಹಾಣ್ (25) ಬಂಧಿತ.

ADVERTISEMENT

14 ಪ್ರಕರಣಗಳಿವೆ: ವಿಶಾಲ್‌ ಸಿಂಗ್‌ ವಿರುದ್ಧ ಐದು ಕೊಲೆಗೆ ಯತ್ನ, ಎರಡು ಗಡಿಪಾರು ಆದೇಶ ಉಲ್ಲಂಘನೆ, ತಲಾ ಒಂದು ಕೊಲೆ, ಆಯುಧ ಕಾಯ್ದೆ, ಹಣಕ್ಕಾಗಿ ಅಪಹರಣ, ಸುಲಿಗೆ ಪ್ರಕರಣ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಕೊಲೆಗೆ ಯತ್ನ ಮತ್ತು ಆಯುಧ ಕಾಯ್ದೆ ಪ್ರಕರಣ ಮತ್ತು ಗೋವಾದಲ್ಲಿ ಕಳ್ಳತನ ಸೇರಿದಂತೆ 14 ಪ್ರಕರಣ ದಾಖಲಾಗಿವೆ.

ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಶಾಲ್‌ ಸಿಂಗ್‌ ಗಡಿಪಾರು ಆದೇಶ ಲೆಕ್ಕಿಸದೆ, ಬೆಳಗಾವಿ ನಗರ ಪ್ರವೇಶಿಸಿದ್ದ. ಟಿಳಕವಾಡಿ ಠಾಣೆ ವ್ಯಾಪ್ತಿಯಲ್ಲಿ ಹಣಕ್ಕಾಗಿ ಅಪಹರಣ ಮಾಡಿದ್ದ. ಶಾಂತಿ ಕದಡಲು ಯತ್ನಿಸಿದ ಈತನ ವಿರುದ್ಧ ನ್ಯಾಯಾಲಯಗಳು ಮೂರು ಬಾರಿ ಅರೆಸ್ಟ್‌ ವಾರೆಂಟ್‌ ಹೊರಡಿಸಿದ್ದವು. ಮೂರು ರಾಜ್ಯಗಳ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಈತ, ತಮ್ಮ ವ್ಯವಹಾರಗಳಿಗೆ ಕೇವಲ ವಾಟ್ಸ್‌ಆ್ಯಪ್‌, ಇನ್‌ಸ್ಟ್ರಾಗಾಂ ಆ್ಯಪ್‌ಗಳನ್ನು ಬಳಸುತ್ತಿದ್ದ.

ಈತನ ಬಂಧನಕ್ಕಾಗಿ ನಗರ ಪೊಲೀಸ್‌ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ ಜಗದೀಶ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡದ ಸದಸ್ಯರಾದ, ಉದ್ಯಮಬಾಗ್‌ ಠಾಣೆ ಇನ್‌ಸ್ಪೆಕ್ಟರ್‌ ಕಿರಣ ಹೊನಕಟ್ಟಿ ಅವರು, ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಡೇ ಬಜಾರ್ ಠಾಣೆ ಇನ್‌ಸ್ಪೆಕ್ಟರ್‌ ಗೂಂಡಾ ಕಾಯ್ದೆಯಡಿ ಕ್ರಮಕ್ಕಾಗಿ ಪ್ರಸ್ತಾವ ಸಿದ್ಧಪಡಿಸಿದ್ದರು. ಅದನ್ನು ಪರಿಶೀಲಿಸಿದ ನಗರ ಪೊಲೀಸ್ ಕಮಿಷನರ್ ಯಾಡಾ ಮಾರ್ಟಿನ್ ಮಾರ್ಬನ್ಯಾಂಗ್‌, ವಿಶಾಲ್‌ ಸಿಂಗ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಜಾರಿಗೊಳಿಸಿ 2024ರ ಏಪ್ರಿಲ್ 30ರಂದು ಆದೇಶ ಹೊರಡಿಸಿದ್ದರು.

‘ಬೆಳಗಾವಿಯಲ್ಲಿ ಇದೇ ರೀತಿ ಮೂರ್ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿವೆ. ಅವರ ವಿರುದ್ಧವೂ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾರ್ಬನ್ಯಾಂಗ್‌ ಹೇಳಿದ್ದಾರೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.