ADVERTISEMENT

ರಾಜಹಂಸಗಡ: ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ

ಜಿಲ್ಲೆಯಲ್ಲಿ ಕಾಂಗ್ರೆಸ್‌– ಬಿಜೆಪಿ ಪ್ರತಿಷ್ಠೆಗೆ ಕಾರಣವಾಗಿದ್ದ ಛತ್ರಪತಿ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 9:44 IST
Last Updated 2 ಮಾರ್ಚ್ 2023, 9:44 IST
ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ಗುರುವಾರ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ‍ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಗನಗಾರಿ ಬಾರಿದರು
ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ಗುರುವಾರ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ‍ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಗನಗಾರಿ ಬಾರಿದರು   

ರಾಜಹಂಸಗಡ (ಬೆಳಗಾವಿ ತಾ.): ಜಿಲ್ಲೆಯಲ್ಲಿ ಕಾಂಗ್ರೆಸ್‌– ಬಿಜೆಪಿ ನಡುವೆ ಪ್ರತಿಷ್ಠೆಗೆ ಕಾರಣವಾದ, ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಲೋಕಾರ್ಪಣೆ ಮಾಡಿದರು.

‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ನನ್ನಿಂದಲೇ ಆಗಿದೆ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳುತ್ತಲೇ ಬಂದಿದ್ದಾರೆ. ಮಾರ್ಚ್‌ 4 ಹಾಗೂ 5ರಂದು ಪ್ರತಿಮೆ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾಂಗ್ರೆಸ್‌ ಮುಖಂಡರನ್ನು ಮಾತ್ರ ಆಹ್ವಾನಿಸಿದ್ದಾರೆ.

ಇದು ಸರ್ಕಾರದ ಯೋಜನೆಯಾದ್ದರಿಂದ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಮಾಡುವಂತಿಲ್ಲ. ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡರು ತಕರಾರು ತೆಗೆದರು.

ADVERTISEMENT

ಲಕ್ಷ್ಮೀ ಹೆಬ್ಬಾಳಕರ ತಮ್ಮ ಪಟ್ಟಿನಿಂದ ಹಿಂದೆ ಸರಿಯದ ಕಾರಣ, ಅವರಿಗಿಂತ ಮುಂಚಿತವಾಗಿಯೇ ಪ್ರತಿಮೆ ಲೋಕಾರ್ಪಣೆ ಮಾಡಲು ಬಿಜೆಪಿ ಮುಖಂಡರು ಹಟ ಹಿಡಿದರು.

ಅದರಂತೆ, ಕೋಟೆ ಆವರಣದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ನಗಾರಿ ಬಾರಿಸಿ, ಪುಷ್ಪಾರ್ಚಣೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ರಮೇಶ ಜಾರಕಿಹೊಳಿ, ಅನೀಲ್‌ ಬೆನಕೆ, ಅಭಯ ಪಾಟೀಲ, ಪ್ರಾದೇಶಿಕ ಆಯುಕ್ತರಾದ ಎಂ.ಜಿ ಹಿರೇಮಠ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.

ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ‍ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಸೇರಿದ ಜನ

₹5 ಕೋಟಿ ಹೆಚ್ಚುವರಿ ಅನುದಾನ: ‘ದೇಶ ಕಂಡ ಅಪ್ರತಿಮ ನಾಯಕ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಕೆಚ್ಚೆದೆಯ ಹೋರಾಟ ಮಾಡಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಸಂತಸ ತಂದಿದೆ. ರಾಜಹಂಸಗಡ ಕೋಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಆರ್.ಐ.ಡಿ.ಎಲ್, ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಗುರುವಾರ ರಾಜಹಂಸಗಡ ಕೋಟೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಕೋಟೆ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಭವನ, ವಿಶ್ರಾಂತಿ ಗೃಹ ನಿರ್ಮಾಣ ಜೊತೆಗೆ ಇತರ ಮೂಲಭೂತ ಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲಾಗುವುದು’ ಎಂದು ತಿಳಿಸಿದರು.

‘ರಾಜಹಂಸಗಡ ಕೋಟೆಯ ಅಭಿವೃದ್ಧಿಗೆ 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ₹14 ಕೋಟಿ ಮಂಜೂರು ಮಾಡಿದ್ದರು. ಆಗ ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದರು. ಶಾಸಕ ಸಂಜಯ ಪಾಟೀಲ ಅವರ ಪ್ರಯತ್ನದ ಫಲವಾಗಿ ಕೋಟೆಯ ಆವರಣದಲ್ಲಿ ಮೂಲಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು’ ಎಂದರು.

‘ರಾಜಹಂಸ ಅದ್ಭುತ ಕೋಟೆ ಅದ್ಭುತವಾಗಿದೆ. ಶಿವಾಜಿ ಮಹಾರಾಜರ ಕಾಲದ ಗತವೈಭವ, ಸಂಸ್ಕೃತಿ ಸಾರುವ ಕೋಟೆಯಾಗಿದೆ. ಶಿವಾಜಿ ಮಹಾರಾಜರ ವ್ಯಕ್ತಿತ್ವದ ತಕ್ಕ ಹಾಗೆ ಮೂರ್ತಿ ಪ್ರತಿಷ್ಠಾಪನೆಯಾಗಿದೆ’ ಎಂದೂ ಹೇಳಿದರು.

‘ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ನಾಯಕ. ಉತ್ತರ ಭಾರತ ಮೊಗಲರು ಆಡಳಿತದಲ್ಲಿ ಸಿಲುಕಿದ ಸಂದರ್ಬದಲ್ಲಿ ಹಿಂದೂ ಸಾಮ್ರಾಜ್ಯ ಕಟ್ಟಲು, ಮೊಗಲರ ದೊಡ್ಡ ಸಾಮ್ರಾಜ್ಯದ ವಿರುದ್ಧ ಹೋರಾಡಿದರು. ಎದೆಯಲ್ಲಿನ ಧೈರ್ಯ ಹಾಗೂ ತೋಳಲ್ಲಿನ ಬಲವೇ ನಮ್ಮ ಹೋರಾಟಕ್ಕೆ ಸಾಕು ಎಂಬ ಶಿವಾಜಿ ಅವರ ಸಾಹಸ ಅಪ್ರತಿಮವಾದದ್ದು’ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.