ADVERTISEMENT

ಯಲ್ಲಮ್ಮನ‌ಗುಡ್ಡದಲ್ಲಿ ಕಾಮಗಾರಿಗಳಿಗೆ ಚಾಲನೆ; ಪತ್ನಿ ಹೆಸರಲ್ಲಿ ಪೂಜೆ ಮಾಡಿಸಿದ CM

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 10:22 IST
Last Updated 13 ಅಕ್ಟೋಬರ್ 2024, 10:22 IST
   

ಯಲ್ಲಮ್ಮನಗುಡ್ಡ (ಬೆಳಗಾವಿ ಜಿಲ್ಲೆ): ವಿವಿಧ ಕಾಮಗಾರಿಗಳ ಉದ್ಘಾಟ‌ನೆಗಾಗಿ, ಯಲ್ಲಮ್ಮನ ಗುಡ್ಡಕ್ಕೆ ಭಾನುವಾರ ಮಧ್ಯಾಹ್ನ ಭೇಟಿ‌‌ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರೇಣುಕಾದೇವಿ ದರ್ಶನ ಪಡೆದರು. ಅರ್ಚಕರು ನೀಡಿದ್ದ ಲಿಂಬೆಹಣ್ಣುಗಳನ್ನು ದೇವಿಗೆ ಅರ್ಪಿಸಿ ಪ್ರಾರ್ಥಿಸಿದರು. ತಮ್ಮ ಪತ್ನಿ ಪಾರ್ವತಿ ಅವರ ಹೆಸರಲ್ಲೂ ವಿಶೇಷ ಅರ್ಚನೆ ಮಾಡಿಸಿದರು.

ಅರ್ಚಕರು ತಿಲಕ ಕೊಟ್ಟು, ಮಂಗಳಾರತಿ ನೀಡಿ, ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ತಲೆಗೆ ಮುಟ್ಟಿಸಿ ಆಶೀರ್ವಾದಿಸಿದರು. ಈ ವೇಳೆ ಪತ್ನಿ ಪಾರ್ವತಿ, ಧನಿಷ್ಠಾ ನಕ್ಷತ್ರ ಎಂದು ಹೇಳಿದ ಸಿ.ಎಂ, ಪತ್ನಿ ಹೆಸರಲ್ಲೂ ವಿಶೇಷ ಪೂಜೆ‌‌ ಮಾಡಿಸಿದರು.

ಇದೇ ವೇಳೆ‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೂ ಸಾಷ್ಟಾಂಗ ನಮಸ್ಕಾರ ಮಾಡಿದರು. ಹತ್ತು ನಿಮಿಷ ಅಲ್ಲೇ ಕುಳಿತು‌ ಪ್ರಾರ್ಥಿಸಿದರು.

ADVERTISEMENT

ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ‌ ಅವರಿಗೂ ಅರ್ಚಕರು ಲಿಂಬೆಹಣ್ಣುಗಳ‌ನ್ನು ನೀಡಿದರು. ಅವುಗಳನ್ನು ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸಿದ ಸತೀಶ, ದೇವಿಗೆ ಲಿಂಬೆಹಣ್ಣು ಅರ್ಪಿಸಿದರು.

ಸಚಿವರಾದ ಎಚ್.ಕೆ.ಪಾಟೀಲ, ರಾಮಲಿಂಗಾ ರೆಡ್ಡಿ, ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಭರಮಗೌಡ ಕಾಗೆ, ಆಸೀಫ್ ಸೇಠ್, ಎನ್.ಎಚ್.ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ದೇವಿ ದರ್ಶನ ಪಡೆದರು.

ದೇವಸ್ಥಾನದಿಂದ ಹೊರ ಬಂದ ಸಿದ್ದರಾಮಯ್ಯ ಜನರತ್ತ ಕೈ ಬೀಸಿದರು. ಆವರಣದಲ್ಲಿ ಸೇರಿದ್ದ ಜನ ಜೈಕಾರ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.