ಬೆಳಗಾವಿ: ‘ಕವಿ ಬಿ.ಎ. ಸನದಿ ಅವರು ಜಾತಿ, ಧರ್ಮ ಮೀರಿದ ಕವಿತ್ವ ಶಕ್ತಿ ಹಾಗೂ ಮನೋಭಾವ ಉಳ್ಳವರೆಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಹೇಳಿದ್ದರು. ಈ ಮಾತುಗಳು ಅಕ್ಷರಶಃ ಸತ್ಯ’ ಎಂದು ಸಾಹಿತಿ ಸರಜೂ ಕಾಟ್ಕರ್ ನೆನೆದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಬಿ.ಎ. ಸನದಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ಮಾನವೀಯತೆಯ ಕವಿಯಾಗಿದ್ದ ಅವರ ಕವನಗಳು ಪ್ರೀತಿ, ತುಡಿತ, ಕಳಕಳಿಗಳನ್ನು ಪ್ರತಿನಿಧಿಸುವಂಥವಾಗಿವೆ. ಅತ್ಯಂತ ಸಂಭಾವಿತ, ಸಜ್ಜನ ಹಾಗೂ ಸುಸಂಸ್ಕೃತರಾಗಿದ್ದರು’ ಎಂದು ಸ್ಮರಿಸಿದರು.
* ಇದನ್ನೂ ಓದಿ:ಹಿರಿಯ ಸಾಹಿತಿ ಬಿ.ಎ.ಸನದಿ ಇನ್ನಿಲ್ಲ
ಸಾಹಿತಿ ಯ.ರು. ಪಾಟೀಲ ಮಾತನಾಡಿ, ‘ಶಿಂದೊಳ್ಳಿಗೆ ಬಂದಾಗ ಅವರನ್ನು ಭೇಟಿಯಾಗುತ್ತಿದ್ದೆ. ನನ್ನ ಸಾಹಿತ್ಯ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದುಕೊಟ್ಟಿದ್ದರು ಹಾಗೂ ಅನೇಕ ಸಾಹಿತ್ಯ ಚಿಂತನೆಗಳಿಗೆ ಪ್ರೇರಣೆಯಾಗಿದ್ದರು’ ಎಂದು ಸ್ಮರಿಸಿದರು.
‘ನವೋದಯ ಕಾವ್ಯ ಶಕ್ತಿಯಾಗಿ, ಭಾಷಾಂತರಕಾರರಾಗಿ ಕನ್ನಡ ನಾಡಿಗೆ ಅದ್ವಿತೀಯ ಕೊಡುಗೆ ನೀಡಿದವರು’ ಎಂದು ಸಾಹಿತಿ ಚಂದ್ರಕಾಂತ ಪೋಕಳೆ ಹೇಳಿದರು.
ಸಾಹಿತಿ ರಾಮಕೃಷ್ಣ ಮರಾಠೆ ಮಾತಾನಾಡಿ, ‘ಬಿ.ಎ. ಸನದಿ ಪ್ರತಿಷ್ಠಾನದ ಮೂಲಕ ಅವರ ವೈಚಾರಿಕ ಚಿಂತನೆಗಳನ್ನು ಹಿಂದೆನಂತೆಯೇ ಮುಂದುವರಿಸಿಕೊಂಡು ಹೋಗಲಾಗುವುದು’ ಎಂದರು.
ಶಿಕ್ಷಕ ಶಿವರಾಯ ಏಳುಕೋಟಿ ಮಾತನಾಡಿ, ‘ಕೇಳಿದಾಕ್ಷಣ ಕವನ ಕೊಡುವ ತಾಕತ್ತು ಅವರಲ್ಲಿತ್ತು’ ಎಂದು ಹೇಳಿದರು.
ಮುಜರಾಯಿ ಇಲಾಖೆ ಅಧಿಕಾರಿ ರವಿ ಕೋಟಾರಗಸ್ತಿ, ಉಪನ್ಯಾಸಕ ಎಸ್.ಎಸ್. ಅಂಗಡಿ ಮಾತನಾಡಿದರು.
ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಇದ್ದರು. ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಮೌನ ಆಚರಿಸಲಾಯಿತು. ಜನಸಾಹಿತ್ಯ ಪೀಠದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದನ್ನೂ ಓದಿ...ಹುಣ್ಣಿಮೆ ಹರಿಸಿದ ಬೆಳದಿಂಗಳ ದಾರಿ ಹಿಡಿದು...
ಅಧ್ಯಕ್ಷ ಪುಂಡಲೀಕ ಪಾಟೀಲ ಮಾತನಾಡಿ, ‘ಸನದಿ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಅವರ ಹರಿತ ಕಾವ್ಯಶಕ್ತಿ ಎಲ್ಲರನ್ನೂ ಆಕರ್ಷಿಸುವಂತಿತ್ತು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ನವೋದಯ ಸಾಹಿತ್ಯಕ್ಕೆ ಮಂಕು ಕವಿದಂತಾಗಿದೆ’ ಎಂದು ಕಂಬನಿ ಮಿಡಿದರು.
ಪದಾಧಿಕಾರಿಗಳಾದ ಮಹಾಂತೇಶ ಮೆಣಸಿನಕಾಯಿ, ಬಿ.ಎಸ್. ಜಗಾಪುರ, ಚನ್ನಬಸಪ್ಪ ಪಾಗಾದ, ಗೀತಾ ಗಾಣಗಿ, ಶ್ರೀಧರ ಕಮ್ಮಾರ, ಅಭಯ ಕತ್ತಿ, ರಮೇಶ ಗಸ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.