ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ನಾಡಿನೆಲ್ಲೆಡೆ ಅಪಾರ ಜನ ಸೇರಿದ್ದಾರೆ. ಆದರೆ, ಕಾಂಗ್ರೆಸ್– ಬಿಜೆಪಿಯ ಜನಪ್ರತಿನಿಧಿಗಳು ಮಾತ್ರ ತಮ್ಮದೇ ಭೇದನೀತಿ ಮುಂದುವರಿಸಿದ್ದಾರೆ.
ಬುಧವಾರ ಬೆಳಿಗ್ಗೆ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮುಖಂಡರು ಪ್ರತ್ಯೇಕವಾಗಿಯೇ ಬಂದರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೊದಲಿಗೆ ಪ್ರತಿಮೆಗೆ ಗೌರವ ಸಲ್ಲಿಸಿ ಕೆಳಗಿಳಿದರು.
ನಂತರ ಬಂದ ಸಂಸದ ಜಗದೀಶ ಶೆಟ್ಟರ್, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ್ ಬೆನಕೆ ಮುಂತಾದವರು ಮಾಲಾರ್ಪಣೆ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಜಗದೀಶ ಶೆಟ್ಟರ್, ‘ಸರ್ಕಾರಿ ಕಾರ್ಯಕ್ರಮ ಕಾಂಗ್ರೆಸ್– ಬಿಜೆಪಿ ಎನ್ನದೇ ಎಲ್ಲರನ್ನೂ ಒಟ್ಟಿಗೆ ಕರೆಯಬೇಕಿತ್ತು. ಆದರೆ, ಕರೆದಿಲ್ಲ. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಇರುತ್ತದೆ. ಅವರ ಅನುಕೂಲ ತಕ್ಕಂತೆ ಅವರು, ನಮ್ಮ ಅನಕೂಲಕ್ಕೆ ನಾವು ಮಾಲಾರ್ಪಣೆ ಮಾಡಿದ್ದೇವೆ. ಮಾಲಾರ್ಪಣೆ ವಿಚಾರಕ್ಕೆ ನಾವು ಗೊಂದಲ ಮಾಡಲ್ಲ. ಈ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ನಮ್ಮ ಕಡೆಯಿಂದ ಏನು ಗೌರವ ಕೊಡಬೇಕು ಕೊಟ್ಟಿದ್ದೇವೆ’ ಎಂದರು.
ಶೌರ್ಯದ ಸಂದೇಶ ಸಾರಿ:
‘ಚನ್ನಮ್ಮನ ಶೌರ್ಯದ ಸಂದೇಶ ರಾಜ್ಯಕ್ಕೆ ಹೋಗಬೇಕೆಂಬುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರ ಅಂಚೆಚೀಟಿ ಸಿದ್ಧಪಡಿಸಿದೆ. ಇದು ಒಳ್ಳೆಯ ನಿರ್ಧಾರ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ವಿಜಯೋತ್ಸವ ಮೆರವಣಿಗೆಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ವಿಜಯೋತ್ಸವದ ಬಗ್ಗೆ ಎರಡು ವರ್ಷಗಳಿಂದ ವಿಶೇಷ ಗಮನ ಹರಿಸಿದ್ದೇವೆ. ಬಹಳ ಅದ್ಧೂರಿಯಾಗಿ ಉತ್ಸವ ನಡೆದಿದೆ’ ಎಂದರು.
‘ಚನ್ನಪಟ್ಟಣ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ನಿರೀಕ್ಷೆಯಂತೆ ಸಿಪಿವೈ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಸಿಪಿವೈಗೆ ಕಾಂಗ್ರೆಸ್ ಟಿಕೆಟ್ ನೀಡುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಕಾದು ನೋಡೋಣ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಂಡೂರ, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಒಳ್ಳೆಯ ವಾತಾವರಣ ಇದೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಸೀಮಿತವಾದ ಅಭ್ಯರ್ಥಿಗಳಿದ್ದು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನನಗೆ ಶಿಗ್ಗಾಂವಿ ಕ್ಷೇತ್ರದ ಜವಾಬ್ದಾರಿ ಇದೆ’ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಕೇಂದ್ರದಿಂದ ಸೂಕ್ತ ಗೌರವ
‘ಚನ್ನಮ್ಮಾಜಿ ಧೈರ್ಯ, ಶೌರ್ಯ ಇಂದಿನ ಯುವಕರಿಗೆ ಮಾದರಿ. ಅಂಚೆಚೀಟಿ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗೌರವ ಸಲ್ಲಿಸಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
‘ಸಂಸತ್ತಿನ ಆವರಣದಲ್ಲಿ ಇಂದು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ರಾಜ್ಯಸಭಾ ಸದಸ್ಯರು ಸೇರಿ ಅನೇಕರು ದೆಹಲಿಗೆ ಹೋಗಿದ್ದಾರೆ’ ಎಂದರು.
‘ಸಿ.ಪಿ.ಯೋಗೇಶ್ವರ ನಮ್ಮ ಪಕ್ಷಕ್ಕೆ ದುಡಿದಿದ್ದರು. ಅವರಿಗೆ ಟಿಕೆಟ್ ಸಿಗಬೇಕಿತ್ತು. ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಜನರು, ಅಭಿಮಾನಿಗಳ ಒತ್ತಡ ಮೇಲೆ ಕಾಂಗ್ರೆಸ್ ಸೇರಿರಬಹುದು. ಆದರೆ ಮಾನಸಿಕವಾಗಿ ಬಿಜೆಪಿ ಜೊತೆಗೆ ಉಳಿಯುತ್ತಾರೆ’ ಎಂದರು.
ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ: ಲಕ್ಷ್ಮಿ
‘ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ ಇಂದಿಗೆ 200 ವರ್ಷ. ರಾಣಿ ಚನ್ನಮ್ಮನಿಗೆ ನಾಡನಮನ ಸಲ್ಲಿಸಲು ಕರ್ನಾಟಕ ಸರ್ಕಾರದಿಂದ ಅದ್ಧೂರಿ ಉತ್ಸವ ಆಯೋಜಿಸಿದ್ದೇವೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನದ ಕೊರತೆ ಇದೆ ಎಂಬ ದೂರು ಇದೆ. ಪ್ರಾಧಿಕಾರ ರಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹಾಗಾಗಿ, ಕಿತ್ತೂರಿನ ಬಗ್ಗೆ ವಿಶೇಷ ಕಾಳಜಿ ನಮ್ಮ ಸರ್ಕಾರಕ್ಕೆ ಮತ್ತು ನಮಗೂ ಇದೆ. ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
‘ಬ್ರಿಟಿಷರ ವಿರುದ್ಧ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಗಿಂತ ಚನ್ನಮ್ಮ ಮೊದಲು ಹೋರಾಟ ಮಾಡಿದ್ದು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದ್ದರಿಂದ ಅವರು, ಇವರು ದೊಡ್ಡವರು ಎನ್ನುವುದಕ್ಕಿಂತ, ದೇಶದ ಸ್ವಾಭಿಮಾನ ಎತ್ತಿ ಹಿಡಿದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಣಿಯ ಉತ್ಸವವನ್ನು ಎಲ್ಲರೂ ಕೂಡಿಕೊಂಡು ಚನ್ನಾಗಿ ಮಾಡೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.