ADVERTISEMENT

ಬೆಳಗಾವಿ | ಜಿಲ್ಲೆಯಲ್ಲಿ ಬಲಿಷ್ಠವಾದ ಕಾಂಗ್ರೆಸ್‌: ಲಕ್ಷ್ಮಿ ಹೆಬ್ಬಾಳಕರ

ಕೃತಜ್ಞತಾ ಸಮಾರಂಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಭಿಪ್ರಾಯ 

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:11 IST
Last Updated 11 ಜುಲೈ 2024, 15:11 IST
ಮೂಡಲಗಿ ತಾಲ್ಲೂಕಿನ ಅರಭಾವಿಯ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಜರುಗಿದ ಕೃತಜ್ಞತಾ ಸಮಾರಂಭದಲ್ಲಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು
ಮೂಡಲಗಿ ತಾಲ್ಲೂಕಿನ ಅರಭಾವಿಯ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಜರುಗಿದ ಕೃತಜ್ಞತಾ ಸಮಾರಂಭದಲ್ಲಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು    

ಮೂಡಲಗಿ: ‘ರಾಜಕಾರಣ ನಿಂತ ನೀರಲ್ಲ. ಅದು ಯಾರ ಸ್ವತ್ತೂ ಅಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು ನಿಷ್ಠೆಯಿಂದ ಕಾರ್ಯಮಾಡಿದ್ದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯದ ಬಗ್ಗೆ ನನಗೆ ಅಭಿಮಾನವಿದೆ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಅರಭಾವಿಯ ಬಸವೇಶ್ವರ ಸಬಾಭವನದಲ್ಲಿ ಗುರುವಾರ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಗೋಕಾಕ ಮತ್ತು ಅರಭಾವಿ ವಿಧಾನಸಭಾ ಮತಕ್ಷೇತ್ರದ ಮತದಾರರಿಗೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ, ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದೆ ಸತೀಶ ಜಾರಕಿಹೊಳಿಯವರು ಬೆಳಗಾವಿ ಲೋಕಸಭೆಗೆ ಸ್ಪರ್ಧೆ ಮಾಡಿದಾಗ ಅವರಿಗೆ ದೊರೆತ ಮತಗಳಿಗಿಂತಲೂ  ಈ ಬಾರಿ ಮೃಣಾಲ ಹೆಬ್ಬಾಳಕರ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು, ಇದು ಕಾಂಗ್ರೆಸ್ ಪಕ್ಷ ಬಲಿಷ್ಠಗೊಂಡಿರುವುದರ ದ್ಯೋತಕವಾಗಿದೆ’ ಎಂದರು.

‘ನಮ್ಮ ಸೋಲಿಗೆ ಹುಬ್ಬಳ್ಳಿಯ ನೇಹಾ ಹತ್ಯೆ ಕಾರಣ ಇರಬಹುದು. ನರೇಂದ್ರ ಮೋದಿ ಅವರ ಅಲೆ ಇರಬಹುದು. ಒಟ್ಟಿನಲ್ಲಿ ನಮ್ಮ ಸೋಲನ್ನು ಆತ್ಮವಿಶ್ವಾಸದಿಂದ ಸ್ವೀಕಾರಮಾಡಿಕೊಂಡು ಪಕ್ಷವನ್ನು ಬೆಳೆಸುವುದರೊಂದಿಗೆ ಕಾರ್ಯಕರ್ತರನ್ನು ಜೊತೆಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತೇವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಇನ್ನು ನಾಲ್ಕು ವರ್ಷ ಇರುತ್ತದೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮುಂದಿನ ಒಳ್ಳೆಯ ದಿನಗಳನ್ನು ಕಾಯೋಣ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಾಜಿತ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಮಾತನಾಡಿ, ‘ಚುನಾವಣೆಯಲ್ಲಿ ಪ್ರಚಾರ ಸಭೆಗಳಿಗೆ ಅಸಂಖ್ಯ ಪ್ರಮಾಣದಲ್ಲಿ ಜನರು ಬರುತ್ತಿದ್ದರು. ಆದರೂ ನಮಗೆ ಸೋಲಾಗಿದೆ. ನಾವು ಸೋತಿದ್ದರೂ 6 ಲಕ್ಷ ಜನರ ಹೃದಯದಲ್ಲಿ ಉಳಿದಿರುವುದರ ಬಗ್ಗೆ ಖುಷಿ ಇದೆ’ ಎಂದರು.

‘ಸೋಲಿನಲ್ಲಿ ಗೆಲವು ಕಾಣುವುದನ್ನು ನನ್ನ ತಾಯಿಯಿಂದ ಕಲಿತಿರುವೆ. ನಾನು ಎಲ್ಲಿ ಸೋತಿರುವೆನೋ ಅಲ್ಲಿಂದಲೇ ಗೆದ್ದು ಬರುವ ಕನಸ ನನ್ನದು. ಇನ್ನು ಮುಂದೆಯೂ ನಿಮ್ಮ ಮನೆಯ ಮಗನಾಗಿ ಮುಂದುವರೆಯುತ್ತೇನೆ. ಮುಂಬರುವ ತಾಲ್ಲೂಕಾ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ನಿಮ್ಮೆಲ್ಲರ ಪರವಾಗಿ ನಿಂತು ಶ್ರಮಿಸುತ್ತೇನೆ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಮಹಾಂತೇಶ ಕಡಾಡಿ, ಅಶೋಕ ಪೂಜೇರಿ, ಮೂಡಲಗಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ವೇದಿಕೆ ಅಧ್ಯಕ್ಷ ಅನಿಲ ದಳವಾಯಿ, ಸಿದ್ದಲಿಂಗ ದಳವಾಯಿ ಮಾತನಾಡಿದರು.

ಸಮಾರಂಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಮೃಣಾಲ ಹೆಬ್ಬಾಳಕರ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು.

ವೇದಿಕೆಯಲ್ಲಿ ಅರಭಾವಿ ಮತಕ್ಷೇತ್ರ ಕಾಂಗ್ರೇಸ ಮುಂಖಡರಾದ ರಾವಸಾಬ್ ಬೆಳಕೂಡ, ಲಗಮಣ್ಣ ಕಳಸನ್ನವರ, ಭೀಮಪ್ಪ ಹಂದಿಗುಂದ, ಲಖನ್ ಸವಸುದ್ದಿ, ರಮೇಶ ಉಟಗಿ, ವಿ ಪಿ ನಾಯಕ, ಭಗವಂತ ಪಾಟೀಲ, ಗೋಕಾಕ ಕ್ಷೇತ್ರದ ಚಂದ್ರಶೇಖರ ಕೊಣ್ಣೂರ, ಪ್ರಕಾಶ ಭಾಗೋಜಿ, ಶಿವಪುತ್ರ ಜಕಬಾಳ, ಜಯಗುನಿ ಬಡೇಖಾನ್, ದಸ್ತಗೀರ ಪೈಲವಾನ್, ಜಾಕೀರ ನದಾಫ್, ಅಪ್ಪಜ್ ಖತೀಬ್, ಶಬೀರ ಮುಜಾವರ್, ಕಲ್ಪನಾ ಜೋಶಿ, ಪ್ರವೀಣಾ ಬೋಜ ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಇದ್ದರು.

ಬೆಳಗಾವಿ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಈ ಬಾರಿ ಹೆಚ್ಚು ಮತಗಳು ಬಂದಿವೆ. ಪ್ರಜಾಪ್ರಭುತ್ವದಲ್ಲಿ ಏರಿಳಿತ ಇರುವುದು ಸಹಜ. ಜನರು ನೀಡಿದ ತೀರ್ಪಿಗೆ ತಲೆಬಾಗಲೇ ಬೇಕು

-ಲಕ್ಷ್ಮಿ ಹೆಬ್ಬಾಳಕರ ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.