ADVERTISEMENT

ಕಾಂಗ್ರೆಸ್‌ ಪರ ಸತೀಶ ಜಾರಕಿಹೊಳಿ ಕೆಲಸ, ಹೊಂದಾಣಿಕೆ ಪ್ರಮೇಯವಿಲ್ಲ: ಹ್ಯಾರಿಸ್

ವಿಧಾನಪರಿಷತ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:28 IST
Last Updated 3 ಡಿಸೆಂಬರ್ 2021, 15:28 IST
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ   

ಬೆಳಗಾವಿ: ‘ಇಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಬಹಳ ವಿಶ್ವಾಸವಿದೆ’ ಎಂದು ಶಾಸಕ, ಚುನಾವಣಾ ವೀಕ್ಷಕ ಎನ್.ಎ. ಹ್ಯಾರಿಸ್ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಅಣ್ಣ-ತಮ್ಮಂದಿರ ರಾಜಕೀಯವಿಲ್ಲ. ಹೊಂದಾಣಿಕೆ ರಾಜಕೀಯಕ್ಕೆ ಆಸ್ಪದ ಕೊಡುವ ಪ್ರಮೇಯವೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿದೆ. ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು ನಿಶ್ಚಿತ. ಬಿಜೆಪಿ ಕಡೆಯಿಂದ ಒಬ್ಬರು ಅಧಿಕೃತಿ ಹಾಗೂ ಇನ್ನೊಬ್ಬರು ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆ ಪೈಕಿ ಯಾರು ಗೆಲ್ಲುತ್ತಾರೆ ಎಂದು ಜನರು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ನಮ್ಮ ಗೆಲುವಿಗೆ ಸಮಸ್ಯೆ ಇಲ್ಲ’ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ನಮ್ಮ ಮನವಿಗೆ ಸ್ಪಂದಿಸಿ ಚುನಾವಣಾಧಿಕಾರಿಯು, ಎಲ್ಲ ಮತಗಟ್ಟೆಗಳಲ್ಲೂ ವಿಡಿಯೊ ಮಾಡಲು ಮುಂದಾಗಿದ್ದಾರೆ. ಪ್ರತಿ ಮತಗಟ್ಟೆಗೆ ಮೈಕ್ರೊ ಅಬ್ಸರ್ವರ್‌ಗಳನ್ನು ನಿಯೋಜಿಸುತ್ತಿದ್ದಾರೆ. ಇದರಿಂದ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ’ ಎಂದರು.

‘ಬೆಂಗಳೂರಿನ ಗೂಂಡಾಗಳು ಬೆಳಗಾವಿಗೆ ಬಂದು ರಾಜಕೀಯ ಹಸ್ತಕ್ಷೇಪ ಮಾಡಿ, ತೊಂದರೆ ಕೊಡುತ್ತಿದ್ದಾರೆ’ ಎಂದು ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ‘ಬೇರೆಡೆಯಿಂದ ಬಂದು ಇಲ್ಲಿ ತೊಂದರೆ ನೀಡಲು ಸಾಧ್ಯವಿಲ್ಲ. ಇಲ್ಲಿನ ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಆಧಾರರಹಿತ ಹೇಳಿಕೆಗೆ ಅರ್ಥವಿಲ್ಲ’ ಎಂದರು.

‘ಡಿ.5ರಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಮದುರ್ಗ ಮತ್ತು ರಾಯಬಾಗ ತಾಲ್ಲೂಕುಗಳಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಮುಖಂಡರಾದ ಪರಶುರಾಮ ವಗ್ಗಣ್ಣವರ, ಗಜು ಧರನಾಯಿಕ, ಆರ್.ಪಿ. ಪಾಟೀಲ, ರಸೂಲ್ ಮುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.