ADVERTISEMENT

ಬೆಳಗಾವಿಗೆ ಸಿಕ್ಕಿತು ಪೀಠ, ತಪ್ಪಿತು ಅಲೆದಾಟ

ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ

ಸಂತೋಷ ಈ.ಚಿನಗುಡಿ
Published 17 ಜೂನ್ 2022, 19:30 IST
Last Updated 17 ಜೂನ್ 2022, 19:30 IST
ಬೆಳಗಾವಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ
ಬೆಳಗಾವಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ   

ಬೆಳಗಾವಿ: ಗ್ರಾಹಕರ ವ್ಯಾಜ್ಯಗಳಲ್ಲಿ ಸಿಕ್ಕಿಕೊಂಡ ಕಿತ್ತೂರು ಕರ್ನಾಟಕ ಭಾಗದವರಿಗೆ ಇದೊಂದು ಸಮಾಧಾನದ ಸುದ್ದಿ. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಇನ್ನು ಬೆಳಗಾವಿ ನಗರದಲ್ಲಿಯೂ ಕಾರ್ಯ ನಿರ್ವಹಿಸಲಿದೆ.

ವಕೀಲರು ಹಾಗೂ ಗ್ರಾಹಕರ ಸಂಘಟನೆಗಳ ಹೋರಾಟ ಕೊನೆಗೂ ಫಲ ನೀಡಿದೆ. ಮೂರು ವರ್ಷಗಳಿಂದ ನಡೆದ ಸಾಂಘಿಕ ಯತ್ನಕ್ಕೆ ಮಣಿದ ರಾಜ್ಯ ಸರ್ಕಾರ, ಕಾಯಂ ಸಂಚಾರಿ ಪೀಠ ಮಂಜೂರು ಮಾಡಿದೆ. ಶುಕ್ರವಾರ ಸಂಜೆಯೇ ಇದರ ಆದೇಶ ಪ್ರತಿಯನ್ನು ಹೋರಾಟಗಾರರಿಗೆ ನೀಡುವ ಮೂಲಕ, ಶಾಸಕ ಅಭಯ ಪಾಟೀಲ ಸಿಹಿ ಸುದ್ದಿ ಹಂಚಿಕೊಂಡರು.

ಪೀಠವನ್ನು ಪಡೆದೇ ಸಿದ್ಧ ಎಂದು ಹಟಕ್ಕೆ ಬಿದ್ದ ವಕೀಲರು, ಕಳೆದ ನಾಲ್ಕು ದಿನಗಳಿಂದ ಧರಣಿ ಆರಂಭಿಸಿದ್ದರು. ಕೋರ್ಟ್‌ ಕಲಾಪಗಳಲ್ಲಿ ಸಾಕಷ್ಟು ಅಡಚಣೆ ಉಂಟಾಗಿ ಕಕ್ಷಿದಾರರೂ ಅಲೆದಾಡುವಂತಾಗಿತ್ತು. ಇನ್ನೊಂದೆಡೆ, ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ಕೂಡ ಹೋರಾಟಕ್ಕೆ ಪಕ್ಷಾತೀತವಾಗಿ ಕೈ ಜೋಡಿಸಿದರು. ಒತ್ತಡ ಹೆಚ್ಚಿದ್ದರಿಂದ ಸರ್ಕಾರ ಕಣ್ಣು ತೆರೆಯಿತು.

ADVERTISEMENT

ತಪ್ಪಲಿದೆ ಸಾವಿರ ಕಿ.ಮೀ ಅಲೆದಾಟ: ಸದ್ಯ ಬೆಂಗಳೂರಿನಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿದ 6,000ಕ್ಕೂ ಹೆಚ್ಚು ಪ್ರಕರಣಗಳಿವೆ. ಕೆಲವಂತೂ ದಶಕಗಳಿಂದ ಪೆಂಡಿಂಗ್‌ ಬಿದ್ದಿವೆ. ಪ್ರಕರಣಗಳ ಕರೆ ಬಂದಾಗಲೆಲ್ಲ ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವುದು ಅನಿವಾರ್ಯವಾಗಿತ್ತು. ಇದಕ್ಕೆ 500 ಕಿ.ಮೀ ಹೋಗುವುದು, ಬೆಂಗಳೂರಿನಲ್ಲಿ ವಸತಿ ಹೂಡುವುದು ಮತ್ತೆ ಮರಳುವುದು ಹೊರೆಯಾಗಿತ್ತು.

ಸದ್ಯ ಪೀಠ ಮಂಜೂರಾಗಿದ್ದರಿಂದ ವ್ಯಾಜ್ಯಗಳಲ್ಲಿ ಸಿಕ್ಕಿಕೊಂಡ ಹಲವರಿಗೆ ಸಮಾಧಾನ ತಂದಿದೆ. ಜತೆಗೆ, ದೂರದೂರಿಗೆ ಅಲೆದಾಡುವ ಉಸಾಬರಿಯೇ ಬೇಡ ಎಂದು ಅನ್ಯಾಯ ಸಹಿಸಿಕೊಂಡವರಿಗೂ, ಇನ್ನು ಪ್ರಶ್ನಿಸಲು ಸ್ಥೈರ್ಯ ಬಂದಂತಾಗಿದೆ.

ಪೀಠ ಬೇಕೆನಿಸಿದ್ದು ಯಾವಾಗ?: 2019ರವರೆಗೂ ಇಲ್ಲಿನ ಜನರು ವ್ಯಾಜ್ಯಗಳ ಪರಿಹಾರಕ್ಕೆ ಬೆಂಗಳೂರಿಗೆ ಅಲೆಯುತ್ತಿದ್ದರು. ಆದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಬ್ಯಾಂಕ್‌ ಬಂದ್‌ ಆಯಿತು. ಜತೆಗೆ, ಹಳೆಯ ನೋಟುಗಳು ರದ್ದಾದ ಕಾರಣ ಹಲವು ಸಹಕಾರ ಸಂಘಗಳೂ ಮುಚ್ಚಿದವು. ಈ ಎರಡೂ ವಿಷಯಗಳಲ್ಲಿ ದಾವೆ ಹೂಡುವ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ತಡೆಯಾಜ್ಞೆ ತರಲು ಸಂಘಗಳವರೂ ಬೆಂಗಳೂರಿಗೆ ಅಲೆಯಬೇಕಾಯಿತು. ಹೀಗಾಗಿ, ಒಂದು ಸಂಚಾರಿ ಪೀಠ ಬೆಳಗಾವಿಗೇ ಬೇಕು ಎಂಬ ಬೇಡಿಕೆಗೆ ರೆಕ್ಕೆಗಳು ಬಂದವು.

ಹೋರಾಟದ ಹೆಜ್ಜೆಗಳು: ಬೆಳಗಾವಿಯಲ್ಲಿ ನಡೆದ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷರಾದ, ನಿವೃತ್ತ ನ್ಯಾಯಮೂರ್ತಿ ಎಚ್‌.ಜಿ. ರಮೇಶ ಅವರು 2020ರ ಮೇ 20ರಂದು ಶಿಫಾರಸು ಪತ್ರ ಬರೆದರು. ಆದರೆ, ಆಗ ಕೋವಿಡ್‌ ಕಾರಣ ಹೇಳಿದ ಹಣಕಾಸು ಇಲಾಖೆ ಹಿಂದೆ ಸರಿಯಿತು.

2021ರಲ್ಲಿ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾಗಿ ಉಮೇಶ ಕತ್ತಿ ಅಧಿಕಾರ ವಹಿಸಿಕೊಂಡರು. ಬೆಳಗಾವಿ ಹಾಗೂ ಕಲಬುರಗಿ; ಎರಡೂ ಕಡೆಗೆ ಸಂಚಾರಿ ಪೀಠ ಮಂಜೂರು ಮಾಡುವುದಾಗಿ ಅವರು ಭರವಸೆ ನೀಡಿದ್ದರು.

ಎಲ್ಲಿ ಸ್ಥಾಪನೆಯಾಗಲಿದೆ ಪೀಠ?
‘ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಟ್ಟಡದಲ್ಲೇ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಪೀಠ ಸ್ಥಾಪಿಸಬೇಕು ಎಂದು ಮೊದಲಿನಿಂದಲೂ ಬೇಡಿಕೆ ಇಟ್ಟಿದ್ದೇವೆ. ಇದಕ್ಕೆ ಹಳೆಯ ಜಿಲ್ಲಾ ಪಂಚಾಯಿತಿ ಕಚೇರಿ ಕೂಡ ಸೂಕ್ತ. ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪೀಠವಿದ್ದರೆ ವಕೀಲರು ಹಾಗೂ ಗ್ರಾಹಕರಿಗೂ ಅನುಕೂಲ’ ಎಂದು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎನ್‌.ಆರ್‌. ಲಾತೂರ ಹೇಳಿದರು.

‘ಸದ್ಯ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಕೂಡ 5,700 ಪ್ರಕರಣ ಬಾಕಿ ಇವೆ. ಹಾಗಾಗಿ, ನಗರದಲ್ಲೇ ಈ ಪೀಠ ಇರಬೇಕು. ಅದು ಸಾಧ್ಯವಾಗದಿದ್ದರೆ ಸುವರ್ಣ ವಿಧಾನಸೌಧ ಅಥವಾ ಬೇರೆ ಸ್ಥಳದಲ್ಲಿ ಮಾಡಲು ಮನವಿ ಮಾಡಿದ್ದೇವೆ’ ಎಂದೂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರನೇ ಕೋರ್ಟ್‌ಗಾಗಿ ಹೋರಾಟ
‘ಬೆಳಗಾವಿಯಲ್ಲಿ ಬಾಕಿ ಇರುವ ಪ್ರಕರಣಗಳಿಗೆ ತಕ್ಕಂತೆ ಮೂರು ಕೋರ್ಟ್‌ಗಳ ಅವಶ್ಯಕತೆ ಇದೆ. ಸದ್ಯ ಎರಡು ಕೋರ್ಟ್‌ ಮಾತ್ರ ಇವೆ. ಹಾಗಾಗಿ, ಇನ್ನೊಂದು ಹೆಚ್ಚುವರಿ ನ್ಯಾಯಾಲಯಕ್ಕಾಗಿ ಹೋರಾಟ ಮುಂದುವರಿಸಲಾಗುವುದು’ ಎಂದು ವಕೀಲರು ತಿಳಿಸಿದ್ದಾರೆ.

ಸದ್ಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಹಾಗೂ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಇವೆ. ಆದರೆ, ಹೆಚ್ಚುವರಿ ನ್ಯಾಯಾಲಯಕ್ಕೆ ಸೂಕ್ತ ಸಿಬ್ಬಂದಿ ನೀಡಿಲ್ಲ. ನ್ಯಾಯಾಧೀಶರಿಗೆ ಅಗತ್ಯ ಸೌಕರ್ಯಗಳಿಲ್ಲ. ಹೀಗಾಗಿ, ಹಾಲಿ ಇರುವ ಹೆಚ್ಚುವರಿ ಕೋರ್ಟ್‌ಗೆ ಸೌಕರ್ಯ ಒದಗಿಸಬೇಕು. ಜತೆಗೆ, ಇನ್ನೊಂದು ಹೆಚ್ಚುವರಿ ಕೋರ್ಟ್‌ ಮಂಜೂರು ಮಾಡಬೇಕು ಎಂಬ ಬೇಡಿಕೆಯನ್ನು ಮುಂಚೂಣಿಗೆ ತರಲು ವಕೀಲರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.