ADVERTISEMENT

ಶೇ 40ರಷ್ಟು ಕಮಿಷನ್: ಈಶ್ವರಪ್ಪ ವಿರುದ್ಧ ‍ಪ್ರಧಾನಿ, ಕೇಂದ್ರ ಸಚಿವರಿಗೆ ದೂರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 13:41 IST
Last Updated 28 ಮಾರ್ಚ್ 2022, 13:41 IST
   

ಬೆಳಗಾವಿ: ‘ತಾಲ್ಲೂಕಿನ ಹಿಂಡಲಗಾ ವ್ಯಾಪ್ತಿಯಲ್ಲಿ ₹ 4 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳ ಬಿಲ್‌ ಬಿಡುಗಡೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸಹವರ್ತಿಗಳ ಮೂಲಕ ಶೇ 40ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಕೊಡದಿರುವುದರಿಂದ ನನಗೆ ಬಿಲ್ ಸಂದಾಯವಾಗಿಲ್ಲ’ ಎಂದು ಆರೋಪಿಸಿ ಗಣೇಶಪುರದ ನಿವಾಸಿ, ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ ಎನ್ನುವವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಅವರಿಗೆ ಈಚೆಗೆ ಪತ್ರ ಬರೆದಿದ್ದಾರೆ.

‘ಕೂಡಲೇ ಹಣ ಕೊಡಿಸಿ, ಇಲ್ಲವಾದಲ್ಲಿ ಕುಟುಂಬಸಹಿತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಬೆದರಿಕೆ ಒಡ್ಡಿದ್ದಾರೆ.

‘ನಾನು ಹಿಂದೂ ವಾಹಿನಿ ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದೇನೆ. ಸಚಿವ ಈಶ್ವರಪ್ಪ ಅವರು 2021ರ ಫೆ.12ರಂದು ಕೆಲವು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದರು. ಅದರಂತೆ ₹ 4 ಕೋಟಿ ವೆಚ್ಚದಲ್ಲಿ108 ಕಾಮಗಾರಿಗಳನ್ನು ಮಾಡಿದ್ದೇನೆ. ಪೂರ್ಣಗೊಂಡು ವರ್ಷ ಕಳೆದಿದ್ದರೂ ಕಾರ್ಯಾದೇಶವಾಗಲಿ ಅಥವಾ ಹಣವಾಗಲಿ ಸಂಬಂಧಿಸಿದ ಪ್ರಾಧಿಕಾರದಿಂದ ದೊರೆತಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಅವರನ್ನೂ ಭೇಟಿಯಾಗಿ ವಿವರಣೆ ನೀಡಿದ್ದಾರೆ.

‘ನಾನು ಹಿಂದಿನಿಂದ ‍ಪಕ್ಷ ಸಂಘಟನೆಯಲ್ಲೂ ಇದ್ದೇನೆ. ಸಚಿವರು ನೇರವಾಗಿ ನನ್ನಿಂದ ಕಮಿಷನ್ ಕೇಳಿಲ್ಲ. ಅವರ ಸಹವರ್ತಿಗಳ ಮೂಲಕ ಬಯಸುತ್ತಿದ್ದಾರೆ. ಇದರಿಂದ ಮನನೊಂದು ಪತ್ರ ಬರೆದಿದ್ದೇನೆ. ನಿಮ್ಮ ಪತ್ರವನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವರ ಕಚೇರಿಯಿಂದ ಇ–ಮೇಲ್‌ನಲ್ಲಿ ಪ್ರತಿಕ್ರಿಯೆ ಬಂದಿದೆ’ ಎಂದು ಸಂತೋಷ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.