ಬೈಲಹೊಂಗಲ: ‘ಪ್ರತಿಯೊಬ್ಬ ಛಾಯಾಗ್ರಾಹಕರು ತಮ್ಮ ವೃತ್ತಿ ಬದುಕಿನ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ತಾಲ್ಲೂಕು ಪೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘದ 8ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಥಳೀಯವಾಗಿಯು ಸಾಕಷ್ಟು ಹಿರಿಯ ಛಾಯಾಗ್ರಾಹಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಿರಿಯ ಛಾಯಾಗ್ರಾಹಕರು ಮುನ್ನಡೆಯಬೇಕು. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು' ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ, ‘ಪೋಟೊಗ್ರಫಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದೆ. ಸ್ಥಳೀಯ ಛಾಯಾಗ್ರಾಹಕರು ಹೊಸ ತಂತ್ರಜ್ಞಾನ ಮೈಗೂಡಿಸಿಕೊಂಡು ತಮ್ಮ ಪ್ರತಿಭೆ ತೋರಿಸಬೇಕು. ಸಂಘದ ಏಳ್ಗೆಗೆ ಶ್ರಮಿಸಬೇಕು’ ಎಂದರು.
ಬೆಂಗಳೂರು ಕೆಪಿಎ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್. ನಾಗೇಶ, ಮಾಜಿ ರಾಜ್ಯಾಧ್ಯಕ್ಷ ಎಸ್. ಪರಮೇಶ್ವರ, ಹಿರಿಯ ಛಾಯಾಗ್ರಾಹಕ ವಿಜಯ ಪತ್ತಾರ ಮಾತನಾಡಿದರು. ಹಿರಿಯ ಛಾಯಾಗ್ರಾಹಕ ಬಾಳಾಸಾಹೇಬ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರ ಈಶ್ವರ ಹೋಟಿ, ಮಾಜಿ ರಾಜ್ಯಾಧ್ಯಕ್ಷ ಎಸ್. ಪರಮೇಶ್ವರ, ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ರಾಮಣ್ಣವರ ಇದ್ದರು.
ಹಿರಿಯ ಛಾಯಾಗ್ರಾಹಕರಾದ ಅಣ್ಣಾಸಾಹೇಬ ದೇಸಾಯಿ, ಜವಾಹರ ಪತ್ತಾರ, ಮಹಾದೇವ ಕರಾಳೆ, ರಮೇಶ ಕಾಡಗೌಡ, ಪಿ.ಕೆ. ಬಡಿಗೇರ, ಈರನಗೌಡ ಶೀಲವಂತರ ಅವರನ್ನು ಸನ್ಮಾನಿಸಲಾಯಿತು.
ಗೌರವ ಅಧ್ಯಕ್ಷ ರಾಜು ಕೆರೂರ, ಅಧ್ಯಕ್ಷ ರಾಜು ಚಿತ್ರಗಾರ, ಉಪಾಧ್ಯಕ್ಷ ನಾಗೇಶ ಭಾವಿಕಟ್ಟಿ, ಬಸವರಾಜ ಪಾಗದ, ಆನಂದ ಕಬ್ಬಿನ, ಪುನೀತ ಹಿರೇಮಠ, ಚಂದ್ರು ಉಚಿಡಿ, ಮಂಜುನಾಥ ನರಸಣ್ಣವರ, ಬಸವರಾಜ ಗೋಕಾಂವಿ, ಪ್ರಕಾಶ ಕಮ್ಮಾರ, ನಾಗವೇಣಿ ಕುಡಚಿಮಠ, ಎಸ್‌ಜಿವಿ ಆಯುರ್ವೇದಿಕ್ ಮಹಾವಿದ್ಯಾಲಯದ ವತಿಯಿಂದ ಆರೋಗ್ಯ ತಪಾಸಣೆ ನಡೆಯಿತು.
ಛಾಯಾಗ್ರಾಹಕರಿಗೆ ಆರೋಗ್ಯ ತಪಾಸಣೆ ಅತ್ಯುತ್ತಮ ಚಿತ್ರಗಳ ಪ್ರದರ್ಶನ ಸಂಘದ ಬೆಳವಣಿಗೆಗೆ ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.