ADVERTISEMENT

ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ದಂಧೆ, ಕಡಿವಾಣ ಹಾಕಲು ಅಧಿಕಾರಿಗಳು ವಿಫಲ

ಜನಸಾಮಾನ್ಯರಿಗೆ ತೊಂದರೆ

ಎಂ.ಮಹೇಶ
Published 29 ಮಾರ್ಚ್ 2020, 19:30 IST
Last Updated 29 ಮಾರ್ಚ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಜನರ ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಂಗಡಿಕಾರರು, ಅಗತ್ಯ ವಸ್ತುಗಳನ್ನು ಗರಿಷ್ಠ ಮಾರಾಟ ದರ (ಎಂಆರ್‌ಪಿ)ಕ್ಕಿಂತ ಹೆಚ್ಚಿನ ಬೆಲೆಗೆ ಮಾರುವ ಮೂಲಕ ವಸೂಲಿ ದಂಧೆಗಿಳಿದಿದ್ದಾರೆ!

ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಿಸಲಾಗಿದೆ. ದೊಡ್ಡ ದೊಡ್ಡ ಅಂಗಡಿಗಳನ್ನು ಹಾಗೂ ಮಳಿಗೆಗಳನ್ನು ಮುಚ್ಚಿಸಲಾಗಿದೆ. ಪೂರೈಕೆಯಲ್ಲೂ ವ್ಯತ್ಯಯ ಉಂಟಾಗುತ್ತಿದೆ. ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳವರು ಈ ಸಂಕಷ್ಟದ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬೆಂಕಿ ಬಿದ್ದ ಮನೆಯಲ್ಲಿ ಗಳ ತೆಗೆದುಕೊಳ್ಳುವ ಧೋರಣೆಗೆ ಮುಂದಾಗಿದ್ದಾರೆ. ಇದು, ಕೊರೊನಾ ಭೀತಿಯಲ್ಲಿರುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆಯಲ್ಲದೇ, ಹೊರೆಯಾಗಿಯೂ ಪರಿಣಮಿಸಿದೆ.

ಅವಲಂಬನೆ:ಕರ್ಫ್ಯೂ ಮಾದರಿಯ ನಿರ್ಬಂಧ ಇರುವುದರಿಂದ ಜನರು ಸಮೀಪದ ಕಿರಾಣಿ ಅಂಗಡಿಗಳ ಮೇಲೆಯೇ ಅವಲಂಬಿತವಾಗಿದ್ದಾರೆ. ಬಡಾವಣೆಗಳಲ್ಲಿರುವ ಕೆಲವೇ ಅಂಗಡಿಗಳಲ್ಲಿ ಮಾತ್ರವೇ (ಅದೂ ನಿಗದಿತ ಸಮಯದಲ್ಲಿ ಮಾತ್ರ) ಅಕ್ಕಿ, ಬೇಳೆ ಮೊದಲಾದ ಕಾಳುಗಳು, ಅಡುಗೆ ಎಣ್ಣೆ, ಈರುಳ್ಳಿ, ತೆಂಗಿನಕಾಯಿ ಮತ್ತಿತರ ಅತ್ಯವಶ್ಯ ಸಾಮಗ್ರಿಗಳು ಲಭ್ಯ ಇವೆ. ಇವುಗಳನ್ನು ಖರೀದಿಸಲು ಹೋದವರಿಗೆ ಅಂಗಡಿಯವರು ದುಬಾರಿ ಬೆಲೆಯ ಬರೆ ಎಳೆಯುತ್ತಿದ್ದಾರೆ.

ADVERTISEMENT

‘ನಮ್ಮಲ್ಲಿ ಇರುವುದೇ ಕಡಿಮೆ ಸ್ಟಾಕ್‌, ಬೇಕಿದ್ದರೆ ತಗೊಳ್ಳಿ ಇಲ್ಲದಿದ್ದರೆ ಬಿಡಿ’ ಎಂದು ಅಂಗಡಿಗಳವರು ಹೇಳುತ್ತಿದ್ದಾರೆ. ಅನಧಿಕೃತವಾಗಿ ಶೇ 15ರಿಂದ 20ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ಅಕ್ಕಿ ಕೆ.ಜಿ.ಗೆ 10ರಿಂದ 15 ರೂಪಾಯಿ ಹೆಚ್ಚಿಸಿದ್ದಾರೆ. ಅಡುಗೆ ಎಣ್ಣೆ ಲೀಟರ್‌ಗೆ ಸರಾಸರಿ ₹20 ಹೆಚ್ಚಿಸಿದ್ದಾರೆ! ಅದೇ ರೀತಿ ಇತರ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಅವರು ಹೇಳಿದಷ್ಟೇ ಬೆಲೆ ಕೊಡಬೇಕಾದ ಅನಿವಾರ್ಯ ಸ್ಥಿತಿಗೆ ಜನರು ಸಿಲುಕಿದ್ದಾರೆ. ಜನಸಾಮಾನ್ಯರಿಗೆ ಆಗುತ್ತಿರುವ ಈ ತೊಂದರೆ ಹಾಗೂ ಮಾರಾಟಗಾರರಿಂದ ನಡೆಯುತ್ತಿರುವ ವಸೂಲಿ ದಂಧೆಯನ್ನು ತಡೆಯಲು ಸಂಬಂಧಿಸಿದ ಯಾವುದೇ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆ.

ವರಮಾನವಿಲ್ಲದ ವೇಳೆಯಲ್ಲಿ:ಲಾಕ್‌ಡೌನ್‌ ಆಗಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ದಿನದ ವರಮಾನ ನಿಂತು ಹೋಗಿದೆ. ಇರುವ ಅಲ್ಪಸ್ವಲ್ಪ ಹಣದಲ್ಲೇ ಜೀವನದ ಬಂಡಿ ಎಳೆಯಬೇಕಾದ ಅನಿವಾರ್ಯತೆ ಅವರಿಗಿದೆ. ಹೀಗಿರುವಾಗ ಅಗತ್ಯ ವಸ್ತುಗಳಿಗೆ ಎಂಆರ್‌ಪಿಗಿಂತಲೂ ಹೆಚ್ಚಿನ ಬೆಲೆ ಪಡೆಯುತ್ತಿರುವುದು ಅವರಿಗೆ ತೊಂದರೆಯಾಗಿ ಪರಿಣಮಿಸಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಅಕ್ರಮವಾಗಿ ಹೆಚ್ಚಿನ ಬೆಲೆ ಏರಿಕೆಯಾಗುತ್ತಿರುವುಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಜನಸಾಮಾನ್ಯರ ಆಗ್ರಹವಾಗಿದೆ.

ಪೂರೈಕೆಯಾಗದಿದ್ದರೆ...!

ಈ ನಡುವೆ, ಬಡಾವಣೆಗಳಲ್ಲಿ, ಹೊರವಲಯದಲ್ಲಿ ಹಾಗೂ ಪಟ್ಟಣಗಳಲ್ಲಿರುವ ಅಂಗಡಿಗಳಲ್ಲಿ ಅವಶ್ಯ ವಸ್ತುಗಳ ಲಭ್ಯತೆಯ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಅವರು ಹೊಸದಾಗಿ ಸ್ಟಾಕ್‌ ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗೂ ಪೂರೈಕೆ ಮಾಡುವವರೂ ಇಲ್ಲ. ಹೀಗಾಗಿ, ಕೆಲವೇ ದಿನಗಳಲ್ಲಿ ಕಿರಾಣಿ ಅಂಗಡಿಗಳು ಕೂಡ ಮುಚ್ಚಲಿವೆ. ಅಗ, ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಹೀಗಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಮತ್ತು ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.