ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಭ್ರಷ್ಟಾಚಾರ ಎಸಗಿದ ಆರೋಪದ ಕುರಿತು ವಿಚಾರಣೆ ಕೈಗೊಳ್ಳಲು ಎಸಿಬಿ ಅಧಿಕಾರಿಗಳು ಪೂರ್ವಾನುಮತಿ ಕೋರಿದ್ದಾರೆ.
ಎಸಿಬಿ ಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿ ಅವರು ಜೂನ್ 20ರಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಮತಿ ಪತ್ರ ಸಲ್ಲಿಸಿದ್ದಾರೆ.
'ಶಾಸಕ ಅಭಯಕುಮಾರ್ ಭರಂಗೌಡ ಪಾಟೀಲ ಅವರ ಮೇಲೆ ಭ್ರಷ್ಟಾಚಾರ ಆರೋಪದ ತನಿಖೆ ಪೂರ್ಣಗೊಂಡಿದೆ. ಅವರನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಬೇಕು' ಎಂದು ಕೋರಲಾಗಿದೆ.
ಶಾಸಕ ಭ್ರಷ್ಟಾಚಾರ ಎಸಗಿದ್ದಾರೆ, ಅಪಾರ ಆಸ್ತಿ ಕಬಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಅವರು 2012ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣ 2017ರಲ್ಲಿ ಎಸಿಬಿಗೆ ವರ್ಗಾವಣೆಯಾಗಿತ್ತು. ಆದರೆ, ಇದೂವರಗೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ.
'ಎಸಿಬಿ ಅಧಿಕಾರಿಗಳು ಕೂಡಲೇ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಕೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.
'ಪ್ರಕರಣದ ತನಿಖಾ ವರದಿ ಸಲ್ಲಿಸಲು ಎಸಿಬಿ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ಕೋರಿದ್ದರು. ಈಗ ಅವಧಿ ಮುಗಿದಿದೆ. ಆದ್ದರಿಂದ ಯಾವುದೇ ಪ್ರಭಾವಕ್ಕೆ ಒಳಗಾಗದೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಬೇಕು' ಎಂದು ಸುಜೀತ್ ಒತ್ತಾಯಿಸಿದ್ದಾರೆ.
ಈ ಕಾರಣ, ಶಾಸಕ ಅಭಯ ಪಾಟೀಲ ವಿಚಾರಣೆಗಾಗಿ ಅನುಮತಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.