ಮೂಡಲಗಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕಾರ್ಯಗಳಿಂದ ಜಗತ್ತಿನ ಅನೇಕ ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ’ ಎಂದು ಕೆ.ಎಂ.ಎಫ್, ಶಾಸಕ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಉದ್ಧೇಶಿಸಿ ಮಾತನಾಡಿದ ಅವರು, ‘2004ರಿಂದ ಅರಭಾವಿ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ರೈತರ ಸೇವೆ ಮಾಡುತ್ತಿದ್ದೇನೆ. ಎಲ್ಲ ಸಮಾಜ, ಧರ್ಮದವರು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನಂಬಿಕೆ ಇಟ್ಟಿದ್ದಾರೆ. ಇದನ್ನು ಉಳಿಸಿಕೊಳ್ಳುತ್ತೇನೆ’ ಎಂದರು.
‘ಹಿಡಕಲ್ ಜಲಾಶಯದಿಂದ ಕಾಲುವೆ ನೀರು ಫೆಬ್ರುವರಿ ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ರೈತರ ಕಷ್ಟವನ್ನು ಮನಗಂಡು ಕೊನೆಯ ಹಂತದ ರೈತರಿಗೆ ಏಪ್ರಿಲ್ ತಿಂಗಳವರೆಗೆ ನೀರು ಹರಿಯುವಂತೆ ಕ್ರಮ ತೆಗೆದುಕೊಂಡಿದ್ದೇನೆ’ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದ ಕೈ ಬಲಪಡಿಸಲು ಬಾಲಚಂದ್ರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದರು.
ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯ್ಕ, ಅರುಣ ಶಹಾಪೂರ, ಸರ್ವೋತ್ತಮ ಜಾರಕಿಹೊಳಿ, ಸುಭಾಶ ಪಾಟೀಲ, ವಿವೇಕ ಡಬ್ಬಿ, ಮಲ್ಲಿಕಾರ್ಜುನ ಬಾಳಿಕಾಯಿ, ಮಲ್ಲಿಕಾರ್ಜುನ ಮಾದನ್ನವರ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬೈಕ್ ರ್‍ಯಾಲಿ: ಗೋಕಾಕದಿಂದ ಆರಂಭವಾದ ಬೃಹತ್ ಬೈಕ್ ರ್‍ಯಾಲಿ ಲೋಳಸೂರ, ಸಂಗನಕೇರಿ, ಕಲ್ಲೋಳ್ಳಿ, ನಾಗನೂರ, ಮೂಡಲಗಿ ಮೂಲಕ ಗುರ್ಲಾಪುರ ಕ್ರಾಸಿನವರೆಗೆ 2000ಕ್ಕೂ ಹೆಚ್ಚು ಬೈಕುಗಳಿದ್ದ ರ್‍ಯಾಲಿ ಜನಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.