ADVERTISEMENT

ಬವಣೆಯಲ್ಲಿ ಬಾಣಸಿಗರ ಬದುಕು- ಮದುವೆ ಮುಂತಾದ ಸಮಾರಂಭಗಳಿಲ್ಲ, ಆರ್ಡರ್‌ ಸಿಗ್ತಿಲ್ಲ

ಪ್ರದೀಪ ಮೇಲಿನಮನಿ
Published 24 ಮೇ 2021, 8:03 IST
Last Updated 24 ಮೇ 2021, 8:03 IST
ಶುಭ ಸಮಾರಂಭದಲ್ಲಿ ಅಡುಗೆ ಸಿದ್ಧಪಡಿಸುತ್ತಿರುವ ಬಾಣಸಿಗ ಮಲ್ಲಿಕಾರ್ಜುನ ಮತ್ತು ಸಂಗಡಿಗರು (ಸಂಗ್ರಹ ಚಿತ್ರ)
ಶುಭ ಸಮಾರಂಭದಲ್ಲಿ ಅಡುಗೆ ಸಿದ್ಧಪಡಿಸುತ್ತಿರುವ ಬಾಣಸಿಗ ಮಲ್ಲಿಕಾರ್ಜುನ ಮತ್ತು ಸಂಗಡಿಗರು (ಸಂಗ್ರಹ ಚಿತ್ರ)   

ಚನ್ನಮ್ಮನ ಕಿತ್ತೂರು (ಬೆಳಗಾವಿ): ಖಡಕ್ ರೊಟ್ಟಿ, ಚಪಾತಿ, ಉದರ ಬ್ಯಾಳಿ, ದೊಡ್ಡಮೆಣಸಿನಕಾಯಿ ಪಲ್ಲೆ, ಗೋಧಿ ಹುಗ್ಗಿ, ಪುಲಾವ್, ಅನ್ನ ಮತ್ತು ರುಚಿಕಟ್ಟಾದ ಸಾರು, ಮ್ಯಾಲ ಭಜಿ.

ಈ ರೀತಿಯ ವಿವಾಹ ಭೋಜನದ ಖಾದ್ಯಗಳನ್ನು ಸಾವಿರಾರು ಆಮಂತ್ರಿತರಿಗೆ ಸಿದ್ಧಪಡಿಸಿ ಕೂಲಿ ಪಡೆಯುತ್ತಿದ್ದ ಬಾಣಸಿಗರಿಗೆ ಈಗ ಕೆಲಸವೂ ಇಲ್ಲ; ಕೂಲಿಯೂ ಇಲ್ಲದ ದುಃಸ್ಥಿತಿ ನಿರ್ಮಾಣವಾಗಿದೆ.

ಅಧಿಕ ಜನ ಸೇರುವ ಮದುವೆಯನ್ನು ಸರ್ಕಾರ ನಿಷೇಧಿಸಿದೆ. ದೊಡ್ಡ ಮಟ್ಟದ ಶುಭ ಸಮಾರಂಭಗಳೂ ನೆರವೇರುತ್ತಿಲ್ಲ. ಹೀಗಾಗಿ ಅವರೂ ತಮ್ಮ ಕುಟುಂಬದ ಹೊಟ್ಟೆ ತುಂಬಿಸಲು ಪರದಾಡುವಂತಾಗಿದೆ.

ADVERTISEMENT

ರೈತರಿಗೆ, ನೇಕಾರರಿಗೆ, ಅಟೊರಿಕ್ಷಾದವರಿಗೆ ಬೀದಿಬದಿಯ ವ್ಯಾಪಾರಿಗಳ ವಹಿವಾಟಿನ ಮೇಲೆ ತೀವ್ರ ಪ್ರಹಾರ ಮಾಡಿದ್ದ ಕೊರೊನಾ, ಈಗ ಬಾಣಸಿಗರ ಬದುಕಿನ ಮೇಲೆ ಸಂಕಷ್ಟದ ಛಾಯೆ ಆವರಿಸುವಂತೆ ಮಾಡಿದೆ.

ಹತ್ತಾರು ಬಾಣಸಿಗರು:ಕಿತ್ತೂರು ತಾಲ್ಲೂಕಿನಲ್ಲಿ ಸಾವಿರಾರು ಮಂದಿಯ ಅಡುಗೆ ಮಾಡುವವರು ಹತ್ತಾರು ಮಂದಿ ಸಿಗುತ್ತಾರೆ. ಕೋವಿಡ್–19 ಎರಡನೇ ಅಲೆ ಏರುಗತಿಯಲ್ಲಿ ಸಾಗಿ ನೂರಾರು ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಶುಭ ಸಮಾರಂಭಗಳ ಮೇಲೆಯೂ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕದ್ದು–ಮುಚ್ಚಿಯೂ ನೂರಾರು ಜನರನ್ನು ಒಂದೆಡೆ ಸೇರಿಸಿ ಮದುವೆ ಮೊದಲಾದ ಯಾವುದೇ ಶುಭ ಸಮಾರಂಭ ನಡೆಸಲು ಭಯ ಪಡುತ್ತಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ಮೇಲಂತೂ ಇಂತಹ ಸಮಾರಂಭಗಳ ಮೇಲೆ ಹದ್ದಿನ ಕಣ್ಣು ನೆಡಲಾಗಿದೆ. ನಿಗದಿತ ಮದುವೆ ಆಗಿದ್ದರೆ 40 ಜನರಿಗೆ ಅವಕಾಶ ನೀಡಲಾಗುತ್ತಿದೆ. ರುಚಿಕಟ್ಟಾಗಿ ಅಡುಗೆ ತಯಾರಿಸಿ ಉಣಬಡಿಸಲು ನೆರವಾಗುತ್ತಿದ್ದ ಬಾಣಸಿಗರ ಹೊಟ್ಟೆ ಮೇಲೆ ಈ ನಿಯಮ ಬರೆ ಎಳೆದಂತಾಗಿದೆ.

‘ಎರಡ್ಮೂರು ತಿಂಗಳವರೆಗಿರುವ ಮದುವೆ ಸುಗ್ಗಿಯಲ್ಲಿ ಹತ್ತಾರು ಮದುವೆ ಮಾಡಿ ವರ್ಷಕ್ಕೆ ಆಗುವಷ್ಟು ಕುಟುಂಬದ ಎಲ್ಲ ಖರ್ಚು-ವೆಚ್ಚದ ಗಳಿಕೆ ಮಾಡುತ್ತಿದ್ದ ನಮಗೆ ದುಡಿಮೆಯೂ ಇಲ್ಲದಂತಾಗಿದೆ. ಮದುವೆಗೆ ಈಗಂತೂ ಅನುಮತಿ ಇಲ್ಲದ್ದರಿಂದ ಯಾರೂ ಕರೆಯುತ್ತಿಲ್ಲ. ಮೊದಲೇ ಗೊತ್ತುಪಡಿಸಿದ ಮದುವೆಯಾಗಿದ್ದರೆ 40 ಮಂದಿ ಮಾತ್ರ ಸೇರಲು ಸರ್ಕಾರ ಅವಕಾಶ ನೀಡಿದೆ. ಇಷ್ಟು ಜನರ ಅಡುಗೆ ಸಿದ್ಧಪಡಿಸಲು ಹೆಚ್ಚು ಕೂಲಿಯೂ ದೊರೆಯುವುದಿಲ್ಲ’ ಎಂಬ ಅಳಲು ಬಾಣಸಿಗರದಾಗಿದೆ.

ನಮ್ಮೆಡೆಗೂ ನೋಡಲಿ:‘ಅಸಂಘಟಿತ ವಲಯವಾಗಿರುವ ಬಾಣಸಿಗರ ಕಡೆಯೂ ಸರ್ಕಾರ ಕಣ್ಣೆತ್ತಿ ನೋಡಬೇಕು’ ಎನ್ನುತ್ತಾರೆ ಅಶೋಕ. ‘ನಮ್ಮದೇನು ದೊಡ್ಡ ಸಂಖ್ಯೆಯಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಾದರೂ ಸರ್ಕಾರ ನೆರವಿನ ಹಸ್ತಚಾಚಬೇಕು’ ಎನ್ನುತ್ತಾರೆ ಮಲ್ಲಿಕಾರ್ಜನ ಕಲ್ಲೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.