ಬೆಳಗಾವಿ: ಇಲ್ಲಿನ ಆಟೊನಗರದಲ್ಲಿ ಕಣಬರ್ಗಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಂಸದೆ ಮಂಗಲಾ ಸುರೇಶ ಅಂಗಡಿ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಕೋವಿಡ್ ಸೋಂಕು ಇಡೀ ಜಗತ್ತನ್ನೇ ನಿರಂತರವಾಗಿ ಕಾಡುತ್ತಿದೆ. ದೇಶದಲ್ಲೂ ಅನೇಕ ಸಂಕಷ್ಟಗಳು ಎದುರಾಗಿವೆ. ಈ ಸನ್ನಿವೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಸುತ್ತಿದೆ’ ಎಂದರು.
‘ಒಮ್ಮೆಲೆ ಎಲ್ಲ ವಯೋಮಾನದವರೂ ಲಸಿಕೆಗೆ ಬರುತ್ತಿರುವುದರಿಂದ ಒಂದಿಷ್ಟು ಗೊಂದಲಗಳಾಗಿವೆ. ನೋಂದಾಯಿಸಿದವರು ಸೂಚನೆ ಬಂದಾಗ ಲಸಿಕೆ ಪಡೆದುಕೊಂಡರೆ ಕೋವಿಡ್ 3ನೇ ಅಲೆಯಿಂದ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸುರೇಶ ಯಾದವ ನೇತೃತ್ವದಲ್ಲಿ ಕಾರ್ಮಿಕರಿಗೆ ಲಸಿಕೆ ಕೊಡಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ, ‘ನಗರದ ವಿವಿಧ ಕೈಗಾರಿಕಾ ಪ್ರದೇಶಗಳ ಎಲ್ಲ ಕಾರ್ಮಿಕರಿಗೆ ಲಸಿಕೆ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತೇವೆ’ ಎಂದರು.
ಕಣಬರ್ಗಿ ನಗರ ಕುಟುಂಬ ಕಲ್ಯಾಣ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ನಾಗರತ್ನಾ ಮಾಕಿ, ಪ್ರಿಯಾಂಕಾ ಉಂಡಿ, ವಿನೋದಾ ಕುಂಬಾರ, ಆಶಾ ಕಾರ್ಯಕರ್ತೆಯರಾದ ಅಂಜನಾ ಕೊಡ್ಲಿ ಹಾಗೂ ಗೀತಾ ಕುರುಬರ ಲಸಿಕೆ ನೀಡಿದರು.
ಸಂಘದ ಅಧ್ಯಕ್ಷ ಸುರೇಶ ಯಾದವ ಮಾತನಾಡಿದರು. ಗುರು ರೋಡ್‌ಲೈನ್ಸ್ ಸಂಸ್ಥಾಪಕ ಗುರುದೇವ ಪಾಟೀಲ, ಅಶೋಕ ಧನವಡೆ, ವಿ.ಬಿ. ಪಾಟೀಲ, ಮಲ್ಹಾರ ದೀಕ್ಷಿತ್, ನಾನಾಗೌಡ ಬಿರಾದಾರ, ಅಶೋಕ ಧರಿಗೌಡರ, ಶಂಕರ ಬಾಗೇವಾಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.