ADVERTISEMENT

ಹೆಣ್ಣು ಮಗು ಮಾರಾಟಕ್ಕೆ ಯತ್ನ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 16:21 IST
Last Updated 9 ಜೂನ್ 2024, 16:21 IST

ಬೆಳಗಾವಿ: ಅಕ್ರಮವಾಗಿ ಹೆಣ್ಣು ಮಗು ಮಾರಾಟಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳದ ಮಹಾದೇವಿ ಜೈನರ, ಚನ್ನಮ್ಮನ ಕಿತ್ತೂರಿನ ಅಬ್ದುಲ್‌ಗಫಾರ್‌ ಲಾಡಖಾನ್‌, ಬೈಲಹೊಂಗಲ ತಾಲ್ಲೂಕಿನ ತುರಕರ ಶೀಗಿಹಳ್ಳಿಯ ಚಂದನ ಸುಬೇದಾರ, ಬೈಲಹೊಂಗಲ ತಾಲ್ಲೂಕಿನ ಸಂಪಗಾವಿಯ ಪವಿತ್ರಾ ಮಡಿವಾಳರ, ಧಾರವಾಡ ತಾಲ್ಲೂಕಿನ ಹೊಸಟ್ಟಿಯ ಪ್ರವೀಣ ಮಡಿವಾಳರ ಬಂಧಿತರು.

ಈ ಪ್ರಕರಣ ಸಂಬಂಧ ರಾಮತೀರ್ಥ ನಗರದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕ ರಾಜಕುಮಾರ ರಾಠೋಡ ದೂರು ದಾಖಲಿಸಿದ್ದಾರೆ.

ADVERTISEMENT

ಏನಿದು ಪ್ರಕರಣ?

‘ಪವಿತ್ರಾ ಮತ್ತು ಪ್ರವೀಣ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹಕ್ಕೂ ಮುನ್ನ, ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದರಿಂದ ಹೆಣ್ಣು ಮಗು ಜನಿಸಿತ್ತು. 30 ದಿನಗಳ ಮಗುವನ್ನು ಚಂದನ ಮಾರಾಟಕ್ಕೆ ಮುಂದಾಗಿದ್ದರು. ಅದನ್ನು ಮಹಾದೇವಿ ಅವರಿಗೆ ತಂದುಕೊಟ್ಟಿದ್ದರು. ಇದಕ್ಕೆ ₹1.40 ಲಕ್ಷ ನಿಗದಿಪಡಿಸಲಾಗಿತ್ತು. ಈ ವಿಚಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಗೊತ್ತಾಗಿತ್ತು. ರಹಸ್ಯ ಕಾರ್ಯಾಚರಣೆ ನಡೆಸಿದ ಅವರು, ಮಗು ಖರೀದಿಸುವುದಾಗಿ ಭಾನುವಾರ ಮಹಾದೇವಿ ಅವರನ್ನು ಬೆಳಗಾವಿಗೆ ಕರೆಯಿಸಿದರು. ಅಲ್ಲಿ ಮಗು ರಕ್ಷಿಸಿ, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ರಕ್ಷಣಾ ಘಟಕದ ದೂರು ಆಧರಿಸಿ, ಪ್ರಕರಣದಲ್ಲಿ ಭಾಗಿಯಾದ ಐವರನ್ನು ಬಂಧಿಸಲಾಗಿದೆ’ ಎಂದು ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.