ADVERTISEMENT

ಅತ್ಯಾಚಾರ: 20 ವರ್ಷ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:18 IST
Last Updated 22 ನವೆಂಬರ್ 2024, 16:18 IST

ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ₹15 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ರಾಯಬಾಗ ತಾಲ್ಲೂಕಿನ ಹಿಡಕಲ್ಲ ಗ್ರಾಮದ ನಿವಾಸಿ ಶ್ರೀಶೈಲ ಬಸವರಾಜ ಬಿಳ್ಳೂರ(28) ಶಿಕ್ಷೆಗೆ ಒಳಗಾದವ.

‘ನಾವಿಬ್ಬರೂ ಮದುವೆಯಾಗೋಣ. ನೀನು ಬಾರದಿದ್ದರೆ ನಾನು ಸಾಯುವೆ’ ಎಂದು ಬೆದರಿಕೆ ಹಾಕಿದ ಶ್ರೀಶೈಲ, 2017ರ ಜೂನ್‌ 27ರಂದು ಬಾಲಕಿಯನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಹೋಗಿದ್ದ. ರಸ್ತೆಬದಿಯೇ ತಾಳಿ ಕಟ್ಟಿ ಮದುವೆಯಾಗಿದ್ದ. ನಂತರ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಬಾಲಕಿ ಪೋಷಕರು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಸತೀಶ ಚಿಟಗುಬ್ಬಿ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.‍ ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್‌.ಜಿ.ದೇವರಡ್ಡಿ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.