ADVERTISEMENT

ನೂಪುರ ಲೋಕ ಸೃಷ್ಟಿಸಿದ ‘ನೃತ್ಯೋಲ್ಲಾಸ’

ಶಾಂತಲಾ ನಾಟ್ಯಾಲಯ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳು, ವಿದುಷಿಗಳ ಮನೋಜ್ಞ ನೃತ್ಯಾಭಿನಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 6:57 IST
Last Updated 18 ಏಪ್ರಿಲ್ 2023, 6:57 IST
ಬೆಳಗಾವಿಯಲ್ಲಿ ಭಾನುವಾರ ಶಾಂತಲಾ ನಾಟ್ಯಾಲಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ನೃತ್ಯೋಲ್ಲಾಸ’ ಕಾರ್ಯಕ್ರಮದ ಒಂದು ನೋಟ
ಬೆಳಗಾವಿಯಲ್ಲಿ ಭಾನುವಾರ ಶಾಂತಲಾ ನಾಟ್ಯಾಲಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ನೃತ್ಯೋಲ್ಲಾಸ’ ಕಾರ್ಯಕ್ರಮದ ಒಂದು ನೋಟ   

ಬೆಳಗಾವಿ: ಇಲ್ಲಿನ ಶಾಂತಲಾ ನಾಟ್ಯಾಲಯದಿಂದ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ನೃತ್ಯೋಲ್ಲಾಸ’ ಕಾರ್ಯಕ್ರಮ ಕಲಾಪ್ರೇಕ್ಷಕರನ್ನು ರಂಜಿಸಿತು. ಲೋಕಮಾನ್ಯ ರಂಗಮಂದಿರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನೂಪುರ ಲೋಕವೇ ಸೃಷ್ಟಿಯಾಯಿತು.

ಶಾಂತಲಾ ನಾಟ್ಯಾಲಯದ ಗುರು ವಿದುಷಿ ರೇಖಾ ಹೆಗಡೆ ಅವರ ನಿರ್ದೇಶನದಲ್ಲಿ ವಿದ್ಯಾರ್ತಿಗಳು ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ವಿದುಷಿ ಅನುಶ್ರೀ ಖಡಬಡಿ ಹಾಗೂ ತಂಡದವರು ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನಾಂದಿ ಹಾಡಿದರು.

ಸಬ್ ಜೂನಿಯರ್ ತಂಡದ ಶ್ಲೋಕ ಮತ್ತು ರೋಹಿತ್‌ ನೇತೃತ್ವದಲ್ಲಿ ಮೂಡಿಬಂದ ‘ಸಂಪೂರ್ಣ ರಾಮಾಯಣ’ ಪ್ರೇಕ್ಷಕರ ಮನ
ಗೆದ್ದಿತು. ನಿನಾದ್ ಅಶೋಕ್ ಹಾಗೂ ಕಿರಿಯರ ತಂಡದ ವಚನ, ವಿದುಷಿ ರೇಖಾ ಅಶೋಕ ಹೆಗಡೆ ಅವರ ದೇವರನಾಮ, ಋತ್ವಿಕ್ ಅಶೋಕ ಹಾಗೂ ಹಿರಿಯರ ತಂಡದ ಪದಂ, ಸಮೀಕ್ಷಾ ಆರ್. ಕಾರಂತ ಹಾಗೂ ಹಿರಿಯರ ತಂಡವು ಪ್ರಸ್ತುತಪಡಿಸಿದ ಏಕತೆ ಮತ್ತು ವೈವಿಧ್ಯತೆ ಪ್ರಾಕಾರಗಳು ಮನೋಜ್ಞವಾಗಿದ್ದವು.

ADVERTISEMENT

ಒಂದರ ಹಿಂದೆ ಒಂದರಂತೆ ಬಂದ ನೃತ್ಯ ಕಲಾವಿದರ ತಂಡಗಳು
ಶಾಸ್ತ್ರೀಯ ನೃತ್ಯದ ಭೂರಿಭೋಜನ ಬಡಿಸಿದರು. ನಟುವಾಂಗದ ಶೈಲಿಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಉದ್ಘಾಟನೆ: ನಾಟ್ಯಾಂಜಲಿ
ನೃತ್ಯಕಲಾ ಕೇಂದ್ರದ ನಿರ್ದೇಶಕಿ ಸಹನಾ ಭಟ್ ಉದ್ಘಾಟಿಸಿ ಮಾತನಾಡಿ, ‘ಒಂದು ನಾಟ್ಯ ಶಾಲೆ ನಡೆಸುವಾಗ ಅದರ ಹಿಂದಿನ ಶ್ರಮ ಅರ್ಥ ಮಾಡಿಕೊಳ್ಳಬೇಕು. ಶ್ರಮವು ವೇದಿಕೆ ಮೇಲೆ ಮೂಡಿಬಂದು ಸಾರ್ಥಕವಾಗಬೇಕು ಎನ್ನುವುದಷ್ಟೇ ಕಲಾವಿದರ ಕನಸಾಗಿರುತ್ತದೆ’
ಎಂದರು.

ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಮಾತನಾಡಿ, ‘ಗಡಿ ಜಿಲ್ಲೆಯಲ್ಲಿ ಕಲೆಗಳಿಗೆ, ಕಲಾವಿದರಿಗೆ ಕೊರತೆ ಇಲ್ಲ. ಆದರೆ, ಪ್ರೋತ್ಸಾಹದ ಕೊರತೆ ಇರುವುದು ಬೇಸರದ ಸಂಗತಿ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪಂಡಿತ ರವೀಂದ್ರ ಶರ್ಮಾ, ಪ್ರದೀಪ ಭಟ್, ಶ್ರೀಮತಿ ಹೆಗಡೆ, ರತ್ನಮ್ಮ ವೇದಿಕೆಯಲ್ಲಿದ್ದರು. ಸುಬ್ರಹ್ಮಣ್ಯ ಭಟ್ ಮತ್ತು ಆರ್ಯ ಭಂಡಾರಕರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.